ಆಯ್ಕೆಗೆ ಯೋ ಯೋ ಟೆಸ್ಟ್ ಏಕೈಕ ಮಾನದಂಡವಾಗಿರಬಾರದು: ಸಚಿನ್ ತೆಂಡೂಲ್ಕರ್

ಮುಂಬೈ: ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯೋ ಯೋ ಫಿಟ್ನೆಸ್ ಪರೀಕ್ಷೆಯನ್ನೇ ಕಡ್ಡಾಯಗೊಳಿಸಬಾರದೆಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯೋ ಯೋ ಫಿಟ್ನೆಸ್ ಟೆಸ್ಟ್ ಕುರಿತು ಪ್ರತಿಕ್ರಿಯಿಸಿದ ಅವರು, ತಂಡದ ಆಯ್ಕೆಗೆ ಆಯ್ಕೆಗೆ ಯೋ ಯೋ ಫಿಟ್ನೆಸ್ ಪರೀಕ್ಷೆಯನ್ನೇ ಮಾನದಂಡವಾಗಿ ಬಳಸಬಾರದು. ನಾನೆಂದೂ ಯೋ ಯೋ ಟೆಸ್ಟ್ ಎದುರಿಸಿಲ್ಲ. ನಾವು ಆಡುತ್ತಿದ್ದ ದಿನಗಳಲ್ಲಿ ಇದೇ ರೀತಿಯ ಬೀಪ್ ಟೆಸ್ಟ್ ಇರುತ್ತಿದ್ದವು. ಆದರೆ ಆಯ್ಕೆಗೆ ಅದೊಂದೇ ಮಾನದಂಡವಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಆಟಗಾರರಿಗೆ ಫಿಟ್ನೆಸ್ ಮತ್ತು ಪ್ರತಿಭೆಯ ಎರಡು ಗುಣಗಳಿರಬೇಕು. ಯೋ ಯೋ ಟೆಸ್ಟ್ ಪ್ರಮುಖವಾದುದು ನಿಜ. ಆದರೆ ಆಟಗಾರನ ಸಾಮರ್ಥ್ಯವೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಯೋ ಯೋ ಫಿಟ್ನೆಸ್ ಟೆಸ್ಟ್ ನಲ್ಲಿ ವಿಫಲರಾಗಿದ್ದಕ್ಕೆ ಅಂಬಟಿ ರಾಯುಡು ಮತ್ತು ಮೊಹಮದ್ ಶಮಿಯನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಅದಕ್ಕೆ ಮುನ್ನ ಯೋ ಯೋ ಟೆಸ್ಟ್ ಪಾಸಾಗದ ಕಾರಣ ಸುರೇಶ್ ರೈನಾರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿರಲಿಲ್ಲ. ಯೋಯೋ ಟೆಸ್ಟ್ ಕಡ್ಡಾಯಗೊಳಿಸಿರುವ ವಿರುದ್ಧ ಧ್ವನಿ ಎತ್ತಿರುವ ಮಾಜಿ ಕ್ರಿಕೆಟಿಗರ ಪಟ್ಟಿಗೆ ಸಚಿನ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಏನಿದು ಯೋಯೋ ಫಿಟ್ನೆಸ್ ಟೆಸ್ಟ್?
ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮಥ್ರ್ಯ ವನ್ನು ಈ ಪರೀಕ್ಷೆಯಲ್ಲಿ ಆಟಗಾರ ತೋರಿಸಬೇಕಾಗುತ್ತದೆ. ಯೊಯೊ ಫಿಟ್‍ನೆಸ್ 20 ಮೀ ಅಳತೆಯಲ್ಲಿ ಎರಡು ಕೋನ್ ಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್ ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್ ನಲ್ಲಿಟ್ಟ ಕೋನ್ ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತಬೇಕು. ಒಟ್ಟಾರೆ ಮೂರು ಬೀಪ್ ಧ್ವನಿ ಒಳಗಾಗಿ ಸುತ್ತಬೇಕು. ಈ ಬೀಪ್ ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್ ಸೂಚನೆಯಾಗಿರುತ್ತದೆ. ಪ್ರತೀ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಯ ಅಂತರ ಕಡಿಮೆಯಾಗುತ್ತ ಹೋಗುತ್ತದೆ. 2 ಬಾರಿ ಬೀಪ್ ಸಮಯದೊಳಗೆ 40 ಮೀ ಕ್ರಮಿಸಲಾಗದೇ ಹೋದರೆ ಪರೀಕ್ಷೆ ಮುಕ್ತಾಯಗೊಳ್ಳುತ್ತದೆ. ಲ್ಯಾಪ್ಸ್ ಹಾಗೂ ಓಟದ ವೇಗ ಆಧರಿಸಿ ಅಂಕ ನೀಡಿ ಆಯ್ಕೆ ಮಾಲಾಗುತ್ತದೆ.

Comments

Leave a Reply

Your email address will not be published. Required fields are marked *