ಕುತ್ತಿಗೆಯವರೆಗೂ ನೀರು ತುಂಬಿದ್ರು ಹಗ್ಗ ಹಿಡಿದು ಹಿರಿಯ ವ್ಯಕ್ತಿಯನ್ನು ಪಾರು ಮಾಡಿದ್ರು- ವಿಡಿಯೋ ವೈರಲ್

ಭುವನೇಶ್ವರ: ಒಡಿಶಾದಲ್ಲಿ ನೆರೆ ವೇಳೆ ಹಿರಿಯ ನಾಗರಿಕರೊಬ್ಬರನ್ನು ರಕ್ಷಣೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಒಡಿಶಾ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಜುಲೈ 21 ಮತ್ತು 22 ರ ಮಧ್ಯರಾತ್ರಿ ಸಂಬಲ್ಪುರ ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ನೀರು ಬೀದಿ ಮತ್ತು ಮನೆಗಳಿಗೆ ನುಗ್ಗಿತ್ತು. ನೆರೆಯಿಂದಾಗಿ ಸುಮಾರು 5,000 ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಜಾಗಕ್ಕೆ ತೆರಳಿದ್ದರು.

ಒಡಿಶಾ ರಕ್ಷಣಾ ಪಡೆ, ಜಿಲ್ಲಾ ಪೊಲೀಸ್, ಜಿಲ್ಲಾ ಆಡಳಿತ ಮತ್ತು ಐದು ಸೇವಾ ತಂಡಗಳು ಒಟ್ಟಾಗಿ ಪ್ರವಾಹದಿಂದಾಗಿ ಸಂಬಲ್ಪುರ ಪಟ್ಟಣದಲ್ಲಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಈ ವೇಳೆ ಸಿಬ್ಬಂದಿ ಹಿರಿಯ ವ್ಯಕ್ತಿಯೊಬ್ಬರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಜುಲೈ 22 ರಂದು ತೆಗೆದಿದ್ದು, ಕುತ್ತಿಗೆವರೆಗೂ ಪ್ರವಾಹದ ನೀರು ತುಂಬಿದ್ದರೂ ಸಿಬ್ಬಂದಿ ಹಗ್ಗದ ಸಹಾಯದಿಂದ ಹಿರಿಯ ನಾಗರಿಕರೊಬ್ಬರನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಹಗ್ಗ ಹಿಡಿದುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದುಕೊಂಡು ಹೋಗಿದ್ದಾರೆ.

ಮಾಧ್ಯಮಗಳಲ್ಲಿ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು, ಜೀವದ ಹಂಗನ್ನು ತೊರೆದು ಹಿರಿಯ ನಾಗರೀಕನನ್ನು ಕಾಪಾಡಿದ ಸಿಬ್ಬಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *