ಬೆಂಗಳೂರು: ಮನೆ ಬಾಡಿಗೆ ಕೊಡಿಸುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಓಬಳಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ. ಈ ಘಟನೆ ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್.ವಿ ಹಳ್ಳಿ ಸರ್ಕಲ್‍ನಲ್ಲಿ ನಡೆದಿದೆ. ಆರೋಪಿ ಓಬಳಪ್ಪ 25 ವರ್ಷದ ಖಾಸಗಿ ಕಂಪೆನಿಯೊಂದರ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಘಟನೆ ವಿವರ:
ಯುವತಿ ಹಲವು ದಿನಗಳಿಂದ ಬಾಡಿಗೆ ಮನೆಯ ಹುಡುಕಾಟದಲ್ಲಿದ್ದರು. ಆಗ ಇತ್ತೀಚೆಗೆ ಸಹೋದ್ಯೋಗಿಯ ಮೂಲಕ ಯುವತಿಗೆ ಓಬಳಪ್ಪನ ಪರಿಚಯವಾಗಿತ್ತು. ಜುಲೈ 15ರಂದು ಓಬಳಪ್ಪನನ್ನು ಆತನ ಕಚೇರಿಯಲ್ಲೇ ಭೇಟಿಯಾಗಿದ್ದರು. ಈ ವೇಳೆ ಬಾಡಿಗೆ ಮನೆ ಬಗ್ಗೆ ವಿಚಾರಿಸಿದಾಗ ಓಬಳಪ್ಪ ಎರಡು ಮನೆಗಳನ್ನು ತೋರಿಸಿದ್ದನು. ಯುವತಿಗೆ ಆ ಮನೆ ಇಷ್ಟವಾಗಲಿಲ್ಲ ಎಂದು ವಾಪಸ್ಸಾಗಿದ್ದರು. ಆದರೆ ಜುಲೈ 17ರಂದು ಪುನಃ ಕರೆ ಮಾಡಿದ ಓಬಳಪ್ಪ ಮನೆ ತೋರಿಸುವುದಾಗಿ ಹೇಳಿದ್ದನು. ಹೀಗಾಗಿ ಆ ದಿನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಚ್.ವಿ ಹಳ್ಳಿ ಸರ್ಕಲ್ ಬಳಿ ಯುವತಿಯನ್ನು ಕರೆದಿದ್ದನು.
ಆರೋಪಿ ಓಬಳಪ್ಪ ಅತಿಥಿ ಎಂಬ ಲಾಡ್ಜ್ ಗೆ ಹೋಗಿ ಬಾಡಿಗೆ ವಿಚಾರ ಮಾತನಾಡೋಣ ಎಂದು ಹೇಳಿದ್ದನು. ಆದರೆ ಅಲ್ಲಿ ಹೋಗಿ ಸ್ವಲ್ಪ ಸಮಯದ ನಂತರ ಏಕಾಏಕಿ ಯುವತಿಯ ಮೇಲೆರಗಿ ಆಕೆಯ ಗುಪ್ತಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಅಲ್ಲಿಂದ ಯುವತಿ ತಪ್ಪಿಸಿಕೊಂಡು ಬಂದಿದ್ದಾರೆ. ಆದರೆ ಆರೋಪಿ ಆಕೆಯನ್ನ ಹಿಂಬಾಲಿಸಿಕೊಂಡು ಬಂದು ಪೊಲೀಸರಿಗೆ ದೂರು ಕೊಟ್ಟರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ. ಅಷ್ಟೇ ಅಲ್ಲದೇ ನಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಸಿದ್ದನು ಅಂತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಯುವತಿ ಈ ಕುರಿತು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ಓಬಳಪ್ಪನನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply