ನೋಟು ನಿಷೇಧದ ವೇಳೆ OT- ವೇತನವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಎಸ್‍ಬಿಐ ಸೂಚನೆ

ನವದೆಹಲಿ: ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು ನಿಷೇಧದ ಸಮಯದಲ್ಲಿ ಓವರ್ ಟೈಮ್ ಕೆಲಸ ಮಾಡಿ ಹೆಚ್ಚುವರಿಯಾಗಿ ಪಡೆದಿದ್ದ ವೇತನವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಆದೇಶ ನೀಡಿದೆ.

2016ರ ನವೆಂಬರ್ 14ರಿಂದ 2016ರ ಡಿಸೆಂಬರ್ 30ರವರೆಗೆ ಏಳು ಗಂಟೆಯವರೆಗೂ ಕೆಲಸ ಮಾಡಿದ್ದಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ವೇತನ ನೀಡಲಾಗಿತ್ತು. ಉದ್ಯೋಗಿಗಳ ಉದ್ಯೋಗರ್ಹತೆಗೆ ಅನುಗುಣವಾಗಿ 17 ಸಾವಿರದಿಂದ 30 ಸಾವಿರ ರುಪಾಯಿವರೆಗೂ ಹೆಚ್ಚುವರಿಯಾಗಿ ವೇತನ ನೀಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ನೀಡಿದ ವೇತನವನ್ನು ಹಿಂಪಡೆಯುವಂತೆ ವಲಯವಾರು ಬ್ರಾಂಚ್ ಅಧಿಕಾರಿಗಳಿಗೆ ಎಸ್‍ಬಿಐ ಆದೇಶಿಸಿದೆ.

ನೋಟು ನಿಷೇಧಕ್ಕೂ ಮುನ್ನ 2017ರ ಏಪ್ರಿಲ್ 1 ರಂದು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವನ್ಕೋರೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಬ್ಯಾಂಕ್ ಗಳು ಎಸ್‍ಬಿಐ ಜೊತೆ ವಿಲೀನವಾಗಿದ್ದವು. ನೋಟು ನಿಷೇಧದ ಸಮಯದಲ್ಲಿ ಸುಮಾರು 70 ಸಾವಿರ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಅದಕ್ಕೆ ಹೆಚ್ಚುವರಿ ವೇತನವನ್ನು ನೀಡುವ ಕುರಿತಾಗಿ ಎಸ್‍ಬಿಐ ಭರವಸೆ ನೀಡಿತ್ತು.

ಆದರೆ ಇದೀಗ ಹೆಚ್ಚುವರಿಯಾಗಿ 70 ಸಾವಿರ ಉದ್ಯೋಗಿಗಳಿಗೆ ನೀಡಿರುವ ವೇತನವನ್ನು ಹಿಂಪಡೆಯುವಂತೆ ಬ್ರಾಂಚ್ ಅಧಿಕಾರಿಗಳಿಗೆ ಎಸ್‍ಬಿಐ ಸೂಚಿಸಿದೆ. ಇದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಓವರ್ ಟೈಮ್ ಹೆಚ್ಚುವರಿ ವೇತನ ಕೇವಲ ಎಸ್‍ಬಿಐ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗಲಿದೆ. ವಿಲೀನಗೊಂಡಿರುವ ಬ್ಯಾಂಕ್ ಉದ್ಯೋಗಿಗಳಿಗಲ್ಲ ಎಂದು ಎಸ್‍ಬಿಐ ಸ್ಪಷ್ಟಪಡಿಸಿದೆ.

ವಿಲೀನಗೊಂಡಾಗ ಬ್ಯಾಂಕ್ ಗಳ ಆಸ್ತಿಗಳೆಲ್ಲ ಎಸ್‍ಬಿಐಗೆ ಸೇರ್ಪಡೆಯಾಗಿತ್ತು. ಆದರೆ ಈಗ ನಮ್ಮನ್ನು ಪ್ರತ್ಯೇಕವಾಗಿ ನೋಡುವುದು ಎಷ್ಟು ಸರಿ ಎಂದು ವಿಲೀನಗೊಂಡ ಬ್ಯಾಂಕ್ ಗಳ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *