ಪ್ರಧಾನಿ ಮೋದಿ ಅಂಧತ್ವವನ್ನು ಕಳೆದುಕೊಂಡ ಧೃತರಾಷ್ಟ್ರ: ಕಾಂಗ್ರೆಸ್

ನವದೆಹಲಿ: ಅಧಿಕಾರದ ಆಸೆಯಿಂದ ಪ್ರಧಾನಿ ನರೇಂದ್ರ ಮೋದಿ ಮಹಾಭಾರತದಲ್ಲಿರುವ ಕುರುಡನಾದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತೇನೆ ಎಂಬ ಭೀತಿಯಿಂದ ಪ್ರಧಾನಿ ಮೋದಿ ಅಧಿಕಾರದ ಆಸೆಯಿಂದಾಗಿ ಕುರುಡನಾದ ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್‍ನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೋಲಿಸಿ ಟೀಕಿಸಿದ್ದಾರೆ.

ಬಿಜೆಪಿಯನ್ನು ಧುರ್ಯೋಧನನಿಗೆ ಹೋಲಿಸಿದ ಅವರು, ಬಿಜೆಪಿ ಅಧಿಕಾರದ ಹಸಿವನ್ನು ಹೊಂದಿರುವ ಪಕ್ಷವಾಗಿದ್ದು, ಸಾಮಾಜಿಕ ಸಾಮರಸ್ಯ ಮತ್ತು ಸೋದರತ್ವವನ್ನು ಮರೆಯುತ್ತಿದೆ. ಚುನಾವಣೆಗೂ ಮುಂಚೆಯೇ ಸಮಾಜವನ್ನು ಧ್ರುವೀಕರಿಸುವ ಉದ್ದೇಶದಿಂದ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಇದೀಗ ವಿಭಜನೆ ಮಾಡುವುದೇ ಅವರ ಮುಖ್ಯ ತತ್ವವಾಗಿದೆ ಎಂದು ದೂರಿದರು.

ಅಧಿಕಾರವನ್ನು ಪಡೆದುಕೊಳ್ಳುವುದು ಪಕ್ಷದ ಗುರಿ ಎಂದು ಪ್ರಧಾನಿ ಹೇಳಿದ್ದರು. ಆದರೆ ಮೋದಿಯವರ ಗೊಡ್ಸೆಯ ಸಿದ್ಧಾಂತವು ಗಾಂಧೀಜಿಯವರ ಸಿದ್ಧಾಂತವನ್ನು ಎಂದಿಗೂ ಹಿಂದಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರು ಕಾಂಗ್ರೆಸ್ ಧರ್ಮದ ಬಗ್ಗೆ ಕೇಳಿದರು. ನಮ್ಮ ಧರ್ಮ ಭಾರತೀಯತೆ. ಇದು ಪ್ರತಿಯೊಬ್ಬ ನಾಗರಿಕನ ಧರ್ಮ, ಜಾತಿ, ಭಾಷೆ, ಸಂಪ್ರದಾಯ ಮತ್ತು ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *