ನಾನು ವಿಷಕಂಠ ಎಂಬ ಸಿಎಂ ಮಾತಿಗೆ ಮಾಜಿ ಸಚಿವ ಎ.ಮಂಜು ತಿರುಗೇಟು

ಮೈಸೂರು: ಕಾಂಗ್ರೆಸ್ ಪಕ್ಷ ಎಚ್.ಡಿ ಕುಮಾರಸ್ವಾಮಿ ಅವರಿಗೆ ವಿಷ ನೀಡಿಲ್ಲ. ಅವರಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದೇವೆ. ಎಲ್ಲಾ ರೀತಿಯ ಸ್ವತಂತ್ರವನ್ನೂ ಅವರಿಗೆ ಕೊಟ್ಟಿದ್ದೇವೆ ಅಂತ ಮಾಜಿ ಸಚಿವ ಎ ಮಂಜು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಬೇಕಾದಂತಹ ಎಲ್ಲಾ ಖಾತೆಗಳನ್ನು ನೀಡಿದ್ದೇವೆ. ಹಣಕಾಸು ಖಾತೆ ಕೂಡ ಅವರ ಬಳಿಯೇ ಇದೆ. ಅದನ್ನ ಅರಿತುಕೊಂಡು ರಾಜ್ಯದ ಪರಿಸ್ಥಿತಿಯನ್ನು ಚೆನ್ನಾಗಿ ಮಾಡುವಂತಹ ಜವಾಬ್ದಾರಿ ಅವರಿದಾಗಿರಬೇಕೇ ಹೊರತು ಕಾಂಗ್ರೆಸ್ ಪಕ್ಷದಲ್ಲ ಅಂತ ಟಾಂಗ್ ನೀಡಿದ್ದಾರೆ.

ಕುಮಾರಸ್ವಾಮಿಯವರು ಇವತ್ತು ಮಾತಾಡುವ ರೀತಿ ನೋಡಿದ್ರೆ ಬೇಸರವಾಗುತ್ತದೆ. ಕಾಂಗ್ರೆಸ್ ಪಕ್ಷದ ಮುಖಂಡರು ಅಥವಾ ಕಾರ್ಯಕರ್ತರು, ಶಾಸಕರುಗಳು ತಪ್ಪು ಮಾಡಿದ ರೀತಿಯಲ್ಲಿ ಮಾತಾಡ್ತಿರೋದು ಕಾಂಗ್ರೆಸ್ ನ ಮುಖಂಡನಾಗಿರೋ ನನಗೆ ನೋವು ತಂದಿದೆ ಅಂದ್ರು.

ಇಂದು ಸಿಎಂ ಕುರ್ಚಿ ಪಡೆದುಕೊಂಡ ನಾನು ಅದರಿಂದ ವಿಜೃಂಭಿಸುತ್ತಿಲ್ಲ. ಅದರಿಂದ ಖುಷಿ ಪಡೋಕೆ ಆಗ್ತಾ ಇಲ್ಲ ಅನ್ನೋ ಮಾತನ್ನು ಸಿಎಂ ಅವರು ಪದೇ ಪದೇ ಹೇಳುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡರೆ ಕುಮಾರಸ್ವಾಮಿಯವರಿಗೆ ಕೊಟ್ಟಂತಹ ಅವಕಾಶ ಬೇರೆ ಯಾವ ಮುಖ್ಯಮಂತ್ರಿಗೂ ಸಿಕ್ಕಿಲ್ಲ. ರಾಜ್ಯದ ರೈತರ ಕಣ್ಣೀರು ಒರೆಸುವಂತಹ ಹಾಗೂ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸ ಮುಖ್ಯಮಂತ್ರಿಯ ಜವಾಬ್ದಾರಿಯಾಗಬೇಕೆ ಹೊರತು ಮುಖ್ಯಮಂತ್ರಿ ಕಣ್ಣೀರು ಒರೆಸುವ ಕೆಲಸ ರೈತರ ಅಥವಾ ರಾಜ್ಯದ 6 ಕೋಟಿ ಜನರ ಅಲ್ಲ ಅಂತ ವಿಷಾದ ವ್ಯಕ್ತಪಡಿಸಿದ್ರು.

ಎಚ್‍ಡಿಡಿ ಪ್ರೋತ್ಸಾಹ ಸರಿ ಅಲ್ಲ:
ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂಗೆ ಪತ್ರ ಬರೆಯೋದನ್ನೆ ತಪ್ಪು ಎಂಬಂತೆ ಬಿಂಬಿಸುವುದು ಸರಿ ಇಲ್ಲ. ಈ ರೀತಿಯ ವರ್ತನೆಯನ್ನು ನೀವು ಬಿಡಬೇಕು. ಈ ರೀತಿ ವರ್ತಿಸುವುದು ಸರ್ಕಾರ ನಡೆಸುವ ಸರಿಯಾದ ವಿಧಾನ ಅಲ್ಲ. ಕಾಂಗ್ರೆಸ್ ವರ್ಚಿಸಿಗೆ ಧಕ್ಕೆ ತರುವ ರೀತಿ ಸಿಎಂ ವರ್ತಿಸಬಾರದು. ಅಲ್ಲದೇ ಮಗ ಕಣ್ಣೀರು ಹಾಕುವುದನ್ನು ತಂದೆ ದೇವೇಗೌಡರು ಪ್ರೋತ್ಸಾಹಿಸಬಾರದಿತ್ತು. ಅನ್ನಭಾಗ್ಯ ಅಕ್ಕಿ ಕಡಿತ ಮಾಡಿದ್ದನ್ನು ಪ್ರಶ್ನೆ ಮಾಡಿದ್ದರಲ್ಲಿ ತಪ್ಪೇನೂ ಇದೆ ಅಂತ ಇದೇ ವೇಳೆ ಮಾಜಿ ಸಚಿವರು ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *