ಚಿತ್ರದುರ್ಗ: ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮೊಟ್ಟ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಈಶ್ವರ ಖಂಡ್ರೆ ಎದುರಲ್ಲೇ ಸಮ್ಮಿಶ್ರ ಸರ್ಕಾರದ ಅಸಮಧಾನದ ಹೊಗೆ ಭುಗಿಲೆದ್ದಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ಸನ್ನು ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಕೂಗು ಸಭೆಯಲ್ಲಿ ಎದ್ದಿತ್ತು. ಇದನ್ನು ಶಮನಗೊಳಿಸಲು ನೂತನ ಕಾರ್ಯಧ್ಯಕ್ಷ ಖಂಡ್ರೆ ಅವರು, ನಮ್ಮ ಕ್ಷೇತ್ರ, ನಮ್ಮ ಪಕ್ಷ ಅದನ್ನು ಹೇಗೆ ಬಿಟ್ಟು ಕೊಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕೈಜೊಡಿಸುವ ಮಾತೇ ಇಲ್ಲ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ. ಆದರೂ ಸಮ್ಮಿಶ್ರ ಸರ್ಕಾರದಲ್ಲಿ ಬಹುಪಾಲು ನಮ್ಮದಾಗಿದೆ. ನಾವು 2019ರ ಲೋಕಸಭೆ ಚುನಾವಣೆಯಲ್ಲಿ ಪುಟಿದೇಳಬೇಕು. ರಾಜ್ಯದ 28 ಲೋಕಸಭೆ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲಬೇಕೆಂಬ ಉದ್ದೇಶದಿಂದ ಚುನಾವಣೆ ಮೈತ್ರಿ ಬಗ್ಗೆ ಕಾಂಗ್ರೆಸ್ ವರಿಷ್ಠರು ಶೀಘ್ರದಲ್ಲಿಯೇ ತೀರ್ಮಾನ ಮಾಡಲಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಅನ್ನಭಾಗ್ಯ ಯೋಜನೆ ಅಡಿ 7 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾಜಿ ಸಚಿವ ಆಂಜನೇಯ ಅವರನ್ನು ಕಡೆಗಣಿಸಲಾಗಿದೆ ಅಂತಾ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಶವಂತ್ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಟಿಕೆಟ್ ನೀಡುಬೇಕು ಎಂದು ಮಾಜಿ ಜಿಲ್ಲಾಧ್ಯಕ್ಷ ಸೇತುರಾಂ ಕೂಡ ಆಗ್ರಹಿಸಿದರು.

Leave a Reply