ಎಚ್‍ಡಿಕೆಯ ವಿಷಕಂಠ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

ಮಂಡ್ಯ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಜೆಡಿಎಸ್ ಅಭಿನಂದನಾ ವೇದಿಕೆಯಲ್ಲಿ ಸಿಎಂ ಕಣ್ಣೀರಿಟ್ಟು, ವಿಷಕಂಠನಾಗಿದ್ದೇನೆ ಎಂದ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ಸಿಎಂ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಮುಖ್ಯಮಂತ್ರಿಗಳು ಅವರ ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಏನೇ ಪಕ್ಷದ ವೇದಿಕೆಯಲ್ಲಿ ಹೇಳಿದ್ದ ಮಾತುಗಳು ಕಾಂಗ್ರೆಸ್‍ಗೆ ಅನ್ವಯಿಸಲ್ಲ. ನಾವು ಜೆಡಿಎಸ್‍ಗೆ ನಮ್ಮ ಪೂರ್ಣ ಸಹಕಾರ ನೀಡುತ್ತಿದ್ದೇವೆ. ಸಿಎಂ ಯಾವ ಕಾರಣಕ್ಕೆ ಕಣ್ಣೀರಿಟ್ಟಿದಾರೋ ಗೊತ್ತಿಲ್ಲ. ಈ ಬಗ್ಗೆ ಸಿಎಂ ಅವರನ್ನೇ ಕೇಳಬೇಕು ಅಂತ ಹೇಳಿದ್ರು.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸುತ್ತಿದೆ ಎಂಬುದೆಲ್ಲಾ ಊಹಾಪೋಹ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಂಪುಟದಲ್ಲಿ ಸ್ಥಾನ ನೀಡುವುದರ ಬಗ್ಗೆ ಯಾವುದೇ ರೀತಿಯ ಚರ್ಚೆಯನ್ನು ಸರ್ಕಾರ ಇದೂವರೆಗೂ ನಡೆಸಿಲ್ಲ. ಹೀಗಾಗಿ ಈ ವಿಚಾರ ನನಗೇ ಗೊತ್ತಿಲ್ಲ ಅಂದ್ರು.

ಸಿಎಂ ಕಣ್ಣೀರು:
ಪಕ್ಷದ ಕಾರ್ಯಕರ್ತರು ಹಾಗೂ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಇಂದು ಸಮ್ಮಿಶ್ರ ಸರ್ಕಾರದ ಜವಾಬ್ದಾರಿ ಹೊತ್ತಿದ್ದೇನೆ. ಇದರಿಂದಾಗಿ ನಿಮ್ಮೆಲ್ಲರನ್ನ ಕೂತು ಮಾತಾಡಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ನಾನು ಸಿಎಂ ಆಗಿರೋದಕ್ಕೆ ನೀವೆಲ್ಲಾ ಸಂಭ್ರಮಿಸುತ್ತಿದ್ದೀರಾ. ನಮ್ಮ ಅಣ್ಣನೋ, ತಮ್ಮನೋ ಸಿಎಂ ಆಗಿದ್ದಾರೆ ಎಂದು ಸಂತೋಷ ಪಟ್ಟಿದ್ದೀರಾ. ಆದರೆ ನನಗೆ ಸಂತೋಷವಿಲ್ಲ. ನಾನೇ ಎಲ್ಲಾ ನೋವನ್ನು ವಿಷಕಂಠನಾಗಿ ನುಂಗಿ ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿ ಕುಮಾರಸ್ವಾಮಿ ಶನಿವಾರ ಕಣ್ಣಿರು ಹಾಕಿದ್ದರು.

https://www.youtube.com/watch?v=3i0iSh9JK3g

Comments

Leave a Reply

Your email address will not be published. Required fields are marked *