ಚಿಕ್ಕಮಗ್ಳೂರಲ್ಲಿ 20ಕ್ಕೂ ಹೆಚ್ಚು ಯುವಕರು ಅರ್ಚಕ ವೃತ್ತಿಗೆ ಗುಡ್ ಬೈ!

ಚಿಕ್ಕಮಗಳೂರು: ಕೈ ತುಂಬಾ ದುಡ್ಡಿದೆ. ಬ್ಯಾಂಕ್ ಬ್ಯಾಲನ್ಸ್ ಇದೆ. ಓಡಾಡೋದಕ್ಕೆ ಕಾರು-ಬೈಕಿದೆ. ಆದ್ರೆ, ಅದೊಂದೇ ಒಂದು ವೃತ್ತಿ ಮಾಡ್ತಾರೆಂದು ಅವರನ್ನ ಹೆಣ್ಣೆತ್ತವರು, ಹೆಣ್ಮಕ್ಕಳು ಒಪ್ಪದ ಕಾರಣ ಆ ವರ್ಗ ಮೂಲ ವೃತ್ತಿಯನ್ನೇ ತ್ಯಜಿಸ್ತಾ, ದೇವರ ಮೇಲೆ ಸಿಟ್ಟಾಗ್ತಿದ್ದಾರೆ.

ಹೌದು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಯುವಕನೊಬ್ಬ ಮದುವೆಗೆ ಹೆಣ್ಣು ಕೊಡದ ಕಾರಣ ಅರ್ಚಕ ವೃತ್ತಿ ತ್ಯಜಿಸಿದ್ದಾರೆ. ಕಳೆದೊಂದು ದಶಕದಲ್ಲಿ ಮಲೆನಾಡಲ್ಲಿ 20ಕ್ಕೂ ಹೆಚ್ಚು ಯುವಕರು ಅರ್ಚಕ ವೃತ್ತಿಗೆ ಗುಡ್ ಬೈ ಹೇಳಿದ್ದಾರೆ.

ಹೆಣ್ಣು ಕೊಡ್ತಿಲ್ಲವೆಂದು ನಾವು ಪೂಜೆಯನ್ನೆ ಮಾಡೋದಿಲ್ಲ ಅಂತ ಪೌರೋಹಿತ್ಯ ವೃತ್ತಿಗೆ ಗುಡ್ ಬೈ ಹೇಳ್ತಿದ್ದಾರೆ. ಕಚ್ಚೆ ಪಂಜೆ, ಜನಿವಾರ, ಶಲ್ಯ ಹಾಕೊಂಡು ಪೌರೋಹಿತ್ಯ ವೃತ್ತಿ ಮಾಡ್ತಿರೋ ಅರ್ಚಕರನ್ನ ಆಧುನಿಕ ಹೆಣ್ಮಕ್ಕಳು ಮದುವೆಯಾಗಲು ನಿರಾಕರಿಸ್ತಿದ್ದಾರೆ. ಇದರಿಂದ 30 ದಾಟಿದ ಅರ್ಚಕ ಯುವಕರು, ಮದುವೆ, ಮಕ್ಕಳು, ವಂಶಕ್ಕಾಗಿ ಮೂಲ ವೃತ್ತಿಯನ್ನೇ ತ್ಯಜಿಸ್ತಿದ್ದಾರೆ.

ಕೇವಲ ಹೆಣ್ಮಕ್ಕಳು ಮಾತ್ರ ಅರ್ಚಕ ಯುವಕರನ್ನ ಬೇಡ ಅಂತಿಲ್ಲ. ಹೆಣ್ಮಕ್ಕಳ ಪೋಷಕರು ಕೂಡ ಕಚ್ಚೆ ಪಂಜೆ, ಜನಿವಾರ ಶಲ್ಯ ಹಾಕೊಂಡ್ ಮಂತ್ರ ಪಠಿಸೋ ಅಳಿಯ ಬೇಡ. ಇನ್ ಶರ್ಟ್ ಮಾಡ್ಕೊಂಡು, ಸೂಟ್ ಹಾಕ್ಕಳೋ ಅಳಿಯನನ್ನು ಒಪ್ಪುತ್ತಿರೋದು ಈ ಬೆಳವಣಿಗೆಗೆ ಕಾರಣವಾಗಿದೆ. ಇಂದಿನ ಹೆಣ್ಮಕ್ಕಳು ಕನಿಷ್ಠ ಡಿಗ್ರಿ ಓದಿರ್ತಾರೆ. ಅವರ ಆಲೋಚನೆ, ಆಸೆಗಳು ಬೇರೆ ಇರೋದ್ರಿಂದ ಅರ್ಚಕ ವೃತ್ತಿ ಬಗ್ಗೆ ಅಸಡ್ಡೆ ಬಂದಿರೋದ್ರಲ್ಲಿ ಅನುಮಾನವಿಲ್ಲ. ದಿನಕ್ಕೆ ಮೂರ್ನಾಲ್ಕು ಸಾವಿರ ದುಡಿಯೋ ಅರ್ಚಕರಿದ್ದಾರೆ. ಆದ್ರೆ, ಆ ಹಣ ಅವ್ರ ವೃತ್ತಿಯ ಬಗ್ಗೆ ಗೌರವ ತಂದು ಕೊಡ್ತಿಲ್ಲ ಎಂದು ಹಿರಿಯ ಅರ್ಚಕರೇ ಹೇಳ್ತಾರೆ.

ಇದು ಹೀಗೆ ಮುಂದುವರಿದ್ರೆ ಮುಂದಿನ ದಿನಗಳಲ್ಲಿ ಪೌರೋಹಿತ್ಯ ವೃತ್ತಿ ಮಾಡೋರೆ ಇಲ್ಲದಂತಾಗಿ ದೇವರಿಗೆ ಪೂಜೆ ಮಾಡೋರೇ ಇಲ್ಲದಂತಾಗ್ಬೋದು ಅನ್ನೋ ಆತಂಕ ಕೂಡ ಸಾರ್ವಜನಿಕರಲ್ಲಿ ಮನೆಮಾಡಿದೆ.

Comments

Leave a Reply

Your email address will not be published. Required fields are marked *