ಸಮ್ಮಿಶ್ರ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸದಿದ್ರೆ ರಾಷ್ಟ್ರಪತಿ ಆಡಳಿತ ಬರಲಿ: ಪೇಜಾವರ ಶ್ರೀ

ವಿಜಯಪುರ: ಸಮ್ಮಿಶ್ರ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸಬೇಕು. ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರಲಿ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀಗಳು, ಸಮ್ಮಿಶ್ರ ಸರ್ಕಾರವಿದ್ದರೆ ಕುದುರೆ ವ್ಯಾಪಾರ ನಡೆಯಲು ಅವಕಾಶವಿರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಯಾರ ಕಾಲು ಯಾರು ಎಳೆಯುತ್ತಾರೆಂದು ತಿಳಿಯುತ್ತದೆ. ಅಲ್ಲದೇ, ಬೇರೆ ಬೇರೆ ದೇಶಗಳು ಯುದ್ಧ ಸಮಯದಲ್ಲಿ ಸರ್ವಪಕ್ಷೀಯ ಆಡಳಿತ ನಡೆಸಿವೆ ಎಂದು ಕಿವಿಮಾತು ಹೇಳಿದರು.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಜೆಡಿಎಸ್ ಪರಸ್ಪರ ಜಗಳ ಆಡುತ್ತಿದ್ದರು. ಸದ್ಯ ಒಟ್ಟಾಗಿ ಸರ್ಕಾರ ನಡೆಯುತ್ತಿದ್ದಾರೆ. ಹಾಗೇ ಮೂರು ಪಕ್ಷದವರು ಸೇರಿ ಸರ್ಕಾರ ಏಕೆ ನಡೆಸಬಾರದು. ಇದರಿಂದ ಹಗರಣಗಳು ನಡೆಯುವುದಿಲ್ಲ. ಎಲ್ಲರೂ ಸೇರಿ ರಾಜ್ಯದ ಅಭಿವೃದ್ಧಿಗೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ. ಆದರೆ ರಾಜ್ಯದ ಯಾವ ಭಾಗಕ್ಕೂ ಅನ್ಯಾಯವಾಗಬಾರದು. ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾದರೆ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ಸರ್ಕಾರ ಸಹಾಯ ಮಾಡಬೇಕು. ಸಾಲಮನ್ನಾ ಮಾಡುವಾಗ ಸರ್ಕಾರ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಬೇಕು. ಇನ್ನು ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದೆ. ಈ ವಿಚಾರ ರಾಜಕಾರಣಿಗಳಿಗೆ ಬಿಟ್ಟಿದ್ದು, ಒಟ್ಟಿನಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು ಎಂದರು.

Comments

Leave a Reply

Your email address will not be published. Required fields are marked *