ಕಟಾವು ಮಾಡಿದ್ದ ಬಾಳೆಯ ಬುಡದಲ್ಲಿ ಬಾಳೆಗೊನೆ – ಗ್ರಾಮಸ್ಥರಲ್ಲಿ ಅಚ್ಚರಿ

ಚಿಕ್ಕಬಳ್ಳಾಪುರ: ಬಾಳೆಗೆ ಒಂದೇ ಗೊನೆ. ರಾಗಿಗೆ ಒಂದೇ ತೆನೆ ಫಸಲು. ಆದರೆ ಬುಡದವರೆಗೂ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಬಾಳೆಯ ಗೊನೆ ಬೆಳೆದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದ ಅಯ್ಯಪ್ಪನ ಸನ್ನಿಧಾನದ ಆವರಣದಲ್ಲಿ ಬಾಳೆಯ ಬುಡದಲ್ಲಿ ಬಾಳೆಗೊನೆ ಬೆಳೆದಿದೆ. ಹಿಂದೂ-ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮುರಗಮಲ್ಲ ಗ್ರಾಮದಲ್ಲಿ ಒಂದೆಡೆ ದರ್ಗಾ ಮತ್ತೊಂದೆಡೆ ಮುಕ್ತೀಶ್ವರನ ದೇವಾಲಯ ಇವೆ. ಇವರೆಡೆರ ನಡುವೆ ಅಯ್ಯಪ್ಪನ ಆಲಯ ಇದೆ. ಅಯ್ಯಪ್ಪನ ಆಲಯದ ಆವರಣದಲ್ಲಿರುವ ಬಾಳೆಯ ಬುಡದಲ್ಲಿ ಈ ವಿಸ್ಮಯ ಜರುಗಿದೆ.

ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಆಯ್ಯಪ್ಪ ಆಲಯದಲ್ಲಿ ಇತ್ತೀಚೆಗೆ ಬಲಮುರಿ ಗಣಪತಿ ಹಾಗೂ ಸುಬ್ರಮಣ್ಯೇಶ್ವರನ ನೂತನ ಗುಡಿ ನಿರ್ಮಿಸಲಾಗಿದೆ. ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾಳೆ ಗಿಡವನ್ನ ಕಟಾವು ಮಾಡಿ ದೇವರ ಅಲಂಕಾರಕ್ಕೆ ಬಳಸಲಾಗಿತ್ತಂತೆ. ಆದರೆ ಈಗ ಕಟಾವು ಮಾಡಲಾಗಿದ್ದ ಒಣಗಿದ ಬಾಳೆಯ ಬುಡದಲ್ಲೇ ಬಾಳೆಗೊನೆ ಬೆಳೆಯುತ್ತಿದ್ದು, ಅಚ್ಚರಿ ಮೂಡಿಸಿದೆ.

ದೇವಾಲಯದ ಆವರಣದಲ್ಲಿ ಬಾಳೆಯ ಗಿಡಗಳಿದ್ದು, ಅದರಲ್ಲಿ ಇತ್ತೀಚೆಗೆ ದೇವರ ಕಾರ್ಯಕ್ಕೆ ಅಂತ ಬಾಳೆಗಿಡವನ್ನ ಕಟಾವು ಮಾಡಲಾಗಿತ್ತು. ಆದರೆ ಈಗ ಕಟಾವು ಮಾಡಲಾಗಿದ್ದ ಬಾಳೆಯ ಬುಡದಲ್ಲಿ ಹೂವಾಗಿ ಕಾಯಾಗಿ ಬಾಳೆಯ ಗೊನೆ ಬೆಳೆತಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದೆಲ್ಲಾ ಅಯ್ಯಪ್ಪ ನ ಮಹಿಮೆ ಅಂತ ಇಲ್ಲಿಯ ಜನ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಸ್ಥಳೀಯರಾದ ನಾಗರಾಜು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *