ನಂಬಿಕೆ ದ್ರೋಹ ನಿಮಗೆ ರಕ್ತಗತವಾಗಿ ಬಂದಿದೆ – ಸಿಎಂ ಎಚ್‍ಡಿಕೆಗೆ ಬಿಎಸ್‍ವೈ ತಿರುಗೇಟು

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ವಿಧಾನಸಭೆಯ ಭಾಷಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಕಲಾಪದಲ್ಲಿ ಮಾತನಾಡಿದ ಯಡಿಯೂರಪ್ಪ, ನಂಬಿಕೆ, ವಿಶ್ವಾಸ ದ್ರೋಹವನ್ನು ಸನ್ಮಾನ್ಯ ಕುಮಾರಸ್ವಾಮಿ ಅವರು ಕೇವಲ ಕಾಂಗ್ರೆಸ್ ಗೆ ಮಾಡಿಲ್ಲ. ನಮಗೂ ಮಾಡಿದ್ದಾರೆ. 20-20 ತಿಂಗಳು ಹೊಂದಾಣಿಕೆ ಮಾಡಿಕೊಂಡು ಸಿಎಂ ಆಗಬೇಕು ಎಂದು ನಿರ್ಧಾರವಾಗಿತ್ತು. ಆದ್ದರಿಂದ ಅವರ ಅಧಿಕಾರಾವಧಿಯಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಆದರೆ ನಿಮ್ಮ ಅಧಿಕಾರ ಮುಗಿದ ಬಳಿಕ ನಾನು ಸಿಎಂ ಆಗುವ ಸಂದರ್ಭದಲ್ಲಿ ನೀವು ನಿಮ್ಮ ತಂದೆ ಅವರು ಇಲ್ಲಸಲ್ಲದ ಷರತ್ತುಗಳನ್ನು ಹಾಕಿದ್ರಿ. ನನಗೆ 20 ತಿಂಗಳು ಅಧಿಕಾರದಲ್ಲಿ ಮುಂದುವರಿಯಲು ಬಿಡದೆ ದ್ರೋಹ ಮಾಡಿದ್ದೀರಿ. ಆದರೆ ನೀವು ಸಿಎಂ ಆಗಲು ನಾನೇ ಕಾರಣ ಎಂದು ಬಿಎಸ್‍ವೈ ಆಕ್ರೋಶದಿಂದ ಹೇಳಿದರು.

ನಾನು ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ಕೊಟ್ಟು 110 ಸೀಟು ಗೆದ್ದು ಬಂದು ಬೇರೆಯವರ ಆಶೀರ್ವಾದದಿಂದ ಐದು ವರ್ಷ ಸರ್ಕಾರವನ್ನು ಮಾಡಿದೆವು. ನಮ್ಮ 5 ವರ್ಷದ ಅವಧಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ರೈತರು ಮತ್ತು ಮಹಿಳೆಯರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅಂದು ನಾವು ಮಾಡಿದ ಯೋಜನೆಯನ್ನು ಜನರು ನೆನಪಿನಲ್ಲಿಟ್ಟುಕೊಂಡು ಈ ಬಾರಿ 104 ಬಿಜೆಪಿ ನಾಯಕರನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.

ನೀವು ಹೇಗೆ ಅಧಿಕಾರ ನಡೆಸುತ್ತೀರಿ ಎಂದು ನಾನು ಕಾದು ನೋಡುತ್ತೇವೆ. ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ. ರೈತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ನಾಡಿನ ಜನತೆಯ ನಂಬಿಕೆಯನ್ನು ಸರ್ಕಾರ ಕಳೆದುಕೊಂಡಿದೆ. ನಂಬಿಕೆ ದ್ರೋಹ ನಿಮಗೆ ರಕ್ತಗತವಾಗಿ ಬಂದಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ಬಿಎಸ್‍ವೈ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *