ಕ್ವಿಂಟಾಲ್ ಮಾವಿಗೆ 2,500 ರೂ. ಬೆಂಬಲ ಬೆಲೆ ಘೋಷಣೆ

ಬೆಂಗಳೂರು: ರೈತರ ಪ್ರತಿಭಟನೆ ಬಿಸಿಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಹಣ್ಣುಗಳ ರಾಜ ಮಾವಿಗೆ ಬೆಂಬಲ ಬೆಲೆ ನೀಡಲು ತೀರ್ಮಾನಿದೆ.

ವಿಧಾನಸಭೆಯಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ ಪ್ರತಿ ಕೆಜಿ ಮಾವಿಗೆ 2.5 ರೂ., ಪ್ರತಿ ಟನ್‍ಗೆ 2,500 ರೂ ಬೆಂಬಲ ಬೆಲೆ ನೀಡಲು ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಮಹಾರಾಷ್ಟ್ರದಲ್ಲಿನ ಮಾವು ಸಂಸ್ಕರಣಾ ಘಟಕಕ್ಕೆ ಮಾವು ಸರಬರಾಜು ಮಾಡಲು ಪ್ರಯತ್ನಿಸಿದೆ. ಆದರೆ ಈ ಬಾರಿ ಮಹಾರಾಷ್ಟ್ರದಲ್ಲೂ ಹೆಚ್ಚಿನ ಬೆಳೆ ಬಂದಿದೆ. ಅಮೆರಿಕಾದಲ್ಲೂ ಬೆಳೆ ಇಳುವರಿ ಹೆಚ್ಚಾಗಿದೆ. ಆದರೂ ರೈತರಿಗೆ ಸಾಂತ್ವನ ಹೇಳಲು ಸರ್ಕಾರವೇ ಮಾರುಕಟ್ಟೆ ಪ್ರವೇಶಿಸಿ ಬೆಂಬಲ ಬೆಲೆ ಕೊಟ್ಟು ಮಾವು ಖರೀದಿಗೆ ಆದೇಶಿಸಲಾಗಿದೆ. ವಿಧಾನಸಭೆ ಕಲಾಪ ಮುಗಿದ ಬಳಿಕ ರಾಜ್ಯದಲ್ಲಿ ಮಾವು ಸಂಸ್ಕರಣ ಘಟಕಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ವೇಳೆ ಸ್ಪೀಕರ್ ರಮೇಶ್ ಕುಮಾರ್, ಎಪಿಎಂಸಿ ಮೂಲಕ ಪ್ರಮಾಣಪತ್ರ ಪಡೆದ ಬಳಿಕವೇ ಮಾವು ಖರೀದಿಗೆ ಸೂಚನೆ ಕೊಡಿ. ಇಲ್ಲವಾದರೆ ದುರುಪಯೋಗ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಮಾವು ಬೆಲೆ ತೀವ್ರ ಕುಸಿತ ಹಿನ್ನೆಲೆ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಜಿಲ್ಲಾ ಮಾವು ಬೆಳೆಗಾರರ ಸಂಘದಿಂದ ಬಂದ್ ಗೆ ಕರೆ ನೀಡಲಾಗಿದೆ. ಒಂದು ಟನ್ ಮಾವಿಗೆ ಮಾರುಕಟ್ಟೆಯಲ್ಲಿ 3000-4000 ರೂಪಾಯಿಗೆ ಕುಸಿತವಾಗಿದೆ. ಒಂದು ಟನ್ ಮಾವಿಗೆ ಕನಿಷ್ಠ 5 ಸಾವಿರ ಬೆಂಬಲ ಬೆಲೆ ನೀಡಿ ಮಾವು ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. ಜಿಲ್ಲೆಯ ಸಾವಿರಾರು ಮಾವು ಬೆಳೆಗಾರರು ಬಂದ್ ನಲ್ಲಿ ಭಾಗಿಯಾಗಿದ್ದು, ಬಂದ್ ಹಿನ್ನೆಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್, ಬಸ್ ಸಂಚಾರ ಸ್ಥಗಿತವಾಗಿದೆ.

Comments

Leave a Reply

Your email address will not be published. Required fields are marked *