ಕಲಾಪಕ್ಕೆ ಇಂದಿನಿಂದ ಬಜೆಟ್ ಬಿಸಿ – ದೋಸ್ತಿ ಸರ್ಕಾರವನ್ನು ಹಣಿಯಲು ಬಿಜೆಪಿ ಸಜ್ಜು

ಬೆಂಗಳೂರು: ಬಜೆಟ್ ಅಧಿವೇಶನದ 5ನೇ ದಿನವಾದ ಇಂದು ವಿಧಾನಸಭೆಯಲ್ಲಿ ಕದನ ಕುತೂಹಲ ಇದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಹೆಚ್‍ಡಿಕೆ ಉತ್ತರ ನೀಡಲಿದ್ದು, ವಿರೋಧ ಪಕ್ಷದ ನಾಯಕ ಬಿಎಸ್‍ವೈಗೆ ಟಾಂಗ್ ಕೊಡಲಿದ್ದಾರೆ.

ಬೆಳಗ್ಗೆ 10.30ಕ್ಕೆ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಆರಂಭದಲ್ಲೇ ಹೆಚ್‍ಡಿಕೆ ಉತ್ತರ ನೀಡಲಿದ್ದಾರೆ. ಅಪ್ಪ ಮಕ್ಕಳು, ಅಣ್ಣ ತಮ್ಮಂದಿರ ಸರ್ಕಾರ ಎಂಬ ಬಿಎಸ್‍ವೈ ಅಬ್ಬರಕ್ಕೆ ಮುಯ್ಯಿ ತೀರಿಸಲು ಹೆಚ್‍ಡಿಕೆ ಸಿದ್ಧವಾಗಿದ್ದಾರೆ ಎನ್ನಲಾಗಿದೆ.

ಇಂದಿನ ವಿಧಾನ ಕಲಾಪ ಕದನ ಕುತೂಹಲ ಮೂಡಿಸಿದ್ದು, ಕುಮಾರಣ್ಣನ ವಾಗ್ಬಾಣದತ್ತ ಎಲ್ಲರ ಚಿತ್ತ ಇದೆ. ಆದ್ರೆ ಇದೇ ವೇಳೆ ಸಂಪೂರ್ಣ ಸಾಲಮನ್ನಾ ಸುಳಿಯಲ್ಲಿ ಹೆಚ್‍ಡಿಕೆ ಸಿಲುಕಿಸಲು ಬಿಎಸ್‍ವೈ ಆಂಡ್ ಬಿಜೆಪಿ ಪ್ಲ್ಯಾನ್ ಮಾಡಿದ್ದು, ಸದನದೊಳಗೆ ಹೋರಾಟ ನಡೆಸುವ ಸಾಧ್ಯತೆ ಹೆಚ್ಚಿದೆ.


ಸದನದೊಳಗೆ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದ್ರೆ, ಸದನದ ಹೊರಗೆ ರೈತರು ಬೀದಿಗಿಳಿಯಲಿದ್ದಾರೆ. ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ಮೈತ್ರಿ ಸರ್ಕಾರದ ವಿರುದ್ಧ ಸಾವಿರಾರು ರೈತರು ಇಂದು ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವದಲ್ಲಿ ರಾಜ್ಯದ್ಯಾಂತ ರೈತರು ಬೆಂಗಳೂರಿಗೆ ಬಂದು ಬೆಳಗ್ಗೆ 10 ಗಂಟೆಗೆ ಫ್ರೀಡಂಪಾರ್ಕ್‍ನಿಂದ ಆನಂದ್ ರಾವ್ ವೃತ್ತದವರೆಗೆ ಜಾಥಾ ಬಂದು, ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಿದ್ದಾರೆ.

ಕೇವಲ ಸುಸ್ತಿ ಬೆಳೆಸಾಲ ಮನ್ನಾ ಅನ್ನುವ ಪ್ರಸ್ತಾಪಕ್ಕೆ ರೈತರು ತೀವ್ರ ವಿರೋಧ ವಿರೋಧ ವ್ಯಕ್ತಪಡಿಸಿದ್ದಾರೆ. ಸುಸ್ತಿ ಬೆಳೆ ಸಾಲ ಹೆಚ್ಚು ಪ್ರಮಾಣದಲ್ಲಿ ಇಲ್ಲ, ಕೆಲವರಿಗಷ್ಟೇ ಅನುಕೂಲವಾಗಲಿದೆ. ಟ್ರಾಕ್ಟರ್ ಸಾಲ, ಬೋರ್‍ವೆಲ್ ಸಾಲ, ಕೃಷಿಗಾಗಿ ಬಂಗಾರ ಇಟ್ಟು ಪಡೆದ ಸಾಲ ಪರಿಗಣಿಸಿಲ್ಲ. ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹ ಹಾಗೂ ಸಾಲ ಮನ್ನಾ ಮಾಡುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಇದು ಸರಿಪಡಿಸಬೇಕು ಎಂಬ ಬೇಡಿಕೆಗಳನ್ನಿಟ್ಟು ರೈತರು ಇಂದು ಬೀದಿಗಿಳಿಯಲಿದ್ದಾರೆ.

Comments

Leave a Reply

Your email address will not be published. Required fields are marked *