ಬಿತ್ತನೆ ಮಾಡಿದ ಜಮೀನಿನಲ್ಲಿ ಪ್ರವಾಹದಂತೆ ನೀರು-ಕಳಪೆ ಕಾಮಗಾರಿಗೆ ಬೇಸತ್ತ ಅನ್ನದಾತ

ಬಳ್ಳಾರಿ: ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ಪ್ರವಾಹದಂತೆ ಹರಿದಿದ್ದರಿಂದ ಬಳ್ಳಾರಿಯ ರೈತರು ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಳ್ಳಾರಿಯ ಹಡಗಲಿ ತಾಲೂಕಿನ ಹತ್ತು ಕೆರೆಗಳಿಗೆ ನೀರುಣಿಸುವ ಹುಲಿಗುಡ್ಡ ಏತ ನೀರಾವರಿ ಯೋಜನೆಯ ದುಸ್ಥಿತಿ. ಕಳೆದ ವರ್ಷ ಸಚಿವರಾಗಿದ್ದ ಪರಮೇಶ್ವರ್ ನಾಯ್ಕ್ ತಾವು ತಂದಿದ್ದ ಅನುದಾನವನ್ನು ತರಾತುರಿಯಲ್ಲಿ ಬಳಸಲು ಹತ್ತಾರು ಕೆರೆಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿದ್ರು. ಅದಕ್ಕಾಗಿ ರೈತರ ಜಮೀನುಗಳ ಮುಖಾಂತರ ದೊಡ್ಡ ದೊಡ್ಡ ಪೈಪ್‍ಲೈನ್‍ಗಳನ್ನು ಅಳವಡಿಸಿದ್ರು.

ಜಮೀನುಗಳಲ್ಲಿ ಅಳವಡಿಸಲಾಗಿದ್ದ ಪೈಪುಗಳು ಒಂದೇ ವರ್ಷಕ್ಕೆ ಒಡೆದು ಹೋಗಿದ್ದರಿಂದ ರೈತರು ಪರದಾಡುವಂತಾಗಿದೆ. ರೈತರ ಜಮೀನಿನಲ್ಲಿ ಪೈಪ್‍ಗಳು ಒಡೆದು ಜಮೀನುಗಳು ಜಲಾವೃತವಾಗುತ್ತಿವೆ. ಇದರಿಂದ ರೈತರ ಇತ್ತೀಚೆಗಷ್ಟೇ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಶೇಂಗಾ, ರಾಗಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ.

ಇತ್ತ ಒಡೆದು ಹೋಗಿರುವ ಪೈಪುಗಳ ರಿಪೇರಿಗಾಗಿ ಜೆಸಿಬಿಗಳ ಮೂಲಕ ಮಣ್ಣು ಅಗೆಯುತ್ತಿರುವದರಿಂದ ಬೆಳೆಗೆ ಮತ್ತಷ್ಟು ಹಾನಿ ಆಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಕಳಪೆ ಕಾಮಗಾರಿ ಮುಚ್ಚಿಕೊಳ್ಳಲು ಗುತ್ತಿಗೆದಾರರು- ಶಾಸಕರು, ಅಧಿಕಾರಿಗಳ ಮೂಲಕ ರೈತರನ್ನು ಬೆದರಿಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.

Comments

Leave a Reply

Your email address will not be published. Required fields are marked *