ನೀನೇ ಬುಲ್ ಬುಲ್, ನೀನೇ ನನ್ ಜಾನ್ ಅಂತ ಮದ್ವೆ ಮಾಡ್ಕೊಂಡು ಹೊರದಬ್ಬಿದ- ನ್ಯಾಯಕ್ಕಾಗಿ ಯುವತಿ ಕಣ್ಣೀರು

ಬೀದರ್: ನೀನೇ ನನ್ನ ಬುಲ್ ಬುಲ್, ನೀನೆ ನನ್ನ ಜಾನ್ ಎಂಬ ಬಣ್ಣ ಬಣ್ಣದ ಮಾತಿಗೆ ಬಲಿಯಾಗಿ ಮನೆ, ಮಠ ಬಿಟ್ಟು ಪ್ರೀತಿ ಮಾಡಿದವನನ್ನು ನಂಬಿಕೊಂಡು ಬಂದು ಮದುವೆಯಾದ ಯುವತಿ ಈಗ ಬೀದಿ ಪಾಲಾಗಿದ್ದಾರೆ.

ಹೌದು. ಬೀದರ್ ತಾಲೂಕಿನ ಪೋಲಕಪಳ್ಳಿ ಗ್ರಾಮದ ಯುವತಿಯೊಬ್ಬಳು ತನ್ನ ಹೊಲದಲ್ಲಿ ಕೆಲಸಕ್ಕೆ ಬರುವ ಯುವಕ ಸಿದ್ದಪ್ಪನ್ನು ಪ್ರೀತಿ ಮಾಡಿ ಕುಟುಂಬಸ್ಥರ ಒಪ್ಪಿಗೆ ಇಲ್ಲದೇ 2013ರಲ್ಲಿ ಮದುವೆಯಾಗಿ ಇಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಮದುವೆಯಾದ ಬಳಿಕ ಎರಡು ವರ್ಷ ಚೆನ್ನಾಗಿಯೇ ಇದ್ದ ಸಿದ್ದಪ್ಪ ಇದಕ್ಕಿದ್ದಂತೆ ತನ್ನ ಕುಟುಂಬದವರ ಮಾತು ಕೇಳಿಕೊಂಡು ಯುವತಿ ಜೊತೆಯಲ್ಲಿ ಕಿರಿಕಿರಿ ಶುರು ಮಾಡಿಕೊಂಡು ಜಗಳಕ್ಕೆ ನಿಂತಿಕೊಂಡು ಬಿಟ್ಟಿದ್ದಾನೆಂತೆ. ಬಳಿಕ ಸಿದ್ದಪ್ಪ ಮತ್ತು ಕುಟುಂಬಸ್ಥರು ಸೇರಿಕೊಂಡು ಈ ಯುವತಿಗೆ ಮನಬಂದಂತೆ ಹೊಡೆದು, ತಮ್ಮ ಮನೆಯಿಂದಲೇ ಹೊರ ಹಾಕಿ ಇನ್ನೊಂದು ಮದುವೆ ಮಾಡಿದ್ದಾರೆ.

ಎರಡನೇ ಪತ್ನಿ ಜೊತೆ ಸಿದ್ದಪ್ಪ ಈಗ ಆರಾಮಾಗಿ ಸಂಸಾರ ನಡೆಸುತ್ತಿದ್ದಾನೆ. ಆದ್ರೆ ಇತ್ತ ಯುವತಿ ಸಹಾಯಕ್ಕೆ ಅವರು ಕುಟುಂಬಸ್ಥರು ಬರುತ್ತಿಲ್ಲ. ಹತ್ತು ಹಲವಾರು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ರೂ, ಅವರು ಕ್ಯಾರೆ ಎನ್ನುತ್ತಿಲ್ಲವಂತೆ. ಪ್ರೀತಿ, ಪ್ರೇಮಕ್ಕೆ ಬಲಿಯಾಗಿ ಬೀದಿ ಪಾಲಾಗಿರುವ ಯುವತಿ ಇದೀಗ ಒಬ್ಬಂಟಿಯಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *