ಮಾಜಿ ಕೇಂದ್ರ ಸಚಿವ ಚಿದಂಬರಂ ಸಂಬಂಧಿಯ ಹತ್ಯೆ – ಹೊಸೂರು ಡ್ಯಾಂ ಬಳಿ ಮೃತ ದೇಹ ಪತ್ತೆ

ಬೆಂಗಳೂರು: ಮಾಜಿ ಕೇಂದ್ರ ಸಚಿವ ಚಿದಂಬರಂ ಸಂಬಂಧಿಯನ್ನು ಅನೈತಿಕ ಸಂಬಂಧದ ಹಿನ್ನೆಲೆ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕ ತಮಿಳುನಾಡಿ ಗಡಿ ಆನೇಕಲ್ ಗೆ ಹೊಂದಿಕೊಂಡಿರುವ ಹೊಸೂರು ಬಳಿ ನಡೆದಿದೆ.

ತಮಿಳುನಾಡಿನ ತಿರಪೂರ್ ನಲ್ಲಿ ಗಾರ್ಮೆಂಟ್ಸ್ ಉದ್ಯಮ ನಡೆಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಸಂಬಂಧಿ ಶಿವಮೂರ್ತಿ(40) ಎಂಬುವವರೆ ಕೊಲೆಯಾದ ದುರ್ದೈವಿ. ಶಿವಮೂರ್ತಿ ಅವರ ಕೊಲೆ ಅನೈತಿಕ ಸಂಬಂಧದ ಹಿನ್ನೆಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಶಿವಮೂರ್ತಿ ಹತ್ಯೆಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮೂರ್ತಿ ಎಂಬುವವರು ಕೊಲೆಗೆ ಸುಪಾರಿ ನೀಡಿದ್ದು, ಮೂರ್ತಿ ಹೆಂಡತಿಯೊಂದಿಗೆ ಶಿವಮೂರ್ತಿ ಅಕ್ರಮ ಸಂಬಂಧ ಹೊಂದಿದ್ದೆ ಕೊಲೆಗೆ ಕಾರಣ ಎನ್ನಲಾಗಿದೆ. ಶಿವಮೂರ್ತಿಯನ್ನು ಕೊಲೆಗೆ ಮಾಡಲು ವಿಮಲ್, ಗೌತಮ್ ಹಾಗೂ ಮನಿಭಾರತಿ ಎಂಬುವರಿಗೆ ಸುಪಾರಿ ನೀಡಲಾಗಿತ್ತು ಎನ್ನಲಾಗಿದೆ.

ಇದೇ ತಿಂಗಳ 25 ರಂದು ಶಿವಮೂರ್ತಿಯವರನ್ನು ಮೂವರು ಆರೋಪಿಗಳು ಅವರದೇ ಕಾರಿನಲ್ಲಿ ಅಪಹರಿಸಿ ಮೆಟ್ಟೂರು ಬಳಿ ಶಿವಮೂರ್ತಿಯವರ ಮುಖಕ್ಕೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ 2 ದಿನಗಳ ಕಾಲ ಶವವನ್ನು ಎಸೆಯಲು ಆಗದೆ ಶವದೊಂದಿಗೆ ತಿರುಗಿದ್ದು ಕೊನೆಗೆ ಬುಧವಾರ ಸಂಜೆ ಹೊಸೂರಿನ ಸಮೀಪದ ಡ್ಯಾಂನಲ್ಲಿ ಮೃತ ದೇಹಕ್ಕೆ ಮೈಲಿಕಲ್ಲು ಕಟ್ಟಿ ಎಸೆದು ಹೋಗಿದ್ದಾರೆ. ಆದರೆ ಈ ವೇಳೇ ವಾನಂಬಾಡಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರು ನೀಡಿದ ಮಾಹಿತಿ ಮೇರೆಗೆ ಡ್ಯಾಂ ನಲ್ಲಿ ತೀವ್ರ ಹುಡುಕಾಟ ನಡೆಸಿ ಶಿವಮೂರ್ತಿಯ ಮೃತ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

Comments

Leave a Reply

Your email address will not be published. Required fields are marked *