ಪ್ರೀತಿಸಿ ಮದ್ವೆಯಾಗಿ ಪತಿಯ ಮನೆಗೆ ಹೋದ್ರೂ ಭದ್ರತೆಗಾಗಿ ಪೊಲೀಸ್ ಮೆಟ್ಟಿಲೇರಿದ ನವಜೋಡಿ

ಬೆಳಗಾವಿ: ಕುಟುಂಬಸ್ಥರ ವಿರೋಧದ ನಡುವೆಯೂ ಬೆಂಗಳೂರಿಗೆ ಹೋಗಿ ಮದುವೆಯಾದ ನವ ಜೋಡಿ ಇದೀಗ ಭದ್ರತೆ ನೀಡುವಂತೆ ಕೋರಿ ಬೆಳಗಾವಿ ಎಸ್‍ಪಿ ಕಚೇರಿ ಮೆಟ್ಟಿಲು ಏರಿದ್ದಾರೆ.

ಅಥಣಿ ತಾಲೂಕಿನ ಕೊಟ್ಟಳಗಿ ಗ್ರಾಮದ ಸಂದೀಪ್ ಕರೆಪ್ಪಗೋಳ ಹಾಗೂ ಗೌರಿ ಪಾಟೀಲ ಮದುವೆಯಾದ ನವಜೋಡಿ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿ ಹಾಗೂ ಮದುವೆಯಾಗುವ ವಿಷಯವನ್ನು ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಇಬ್ಬರ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಹೀಗಾಗಿ ಇದೇ 23 ರಂದು ಈ ಜೋಡಿ ಬೆಂಗಳೂರಿಗೆ ಹೋಗಿ ಮದುವೆಯಾಗಿದ್ದಾರೆ. ಆದರೆ ಹುಡುಗಿಯ ತಂದೆ ಅಣ್ಣಾಸಾಬ್ ಪಾಟೀಲ್ ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಐಗಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಂಗಳೂರಲ್ಲಿ ಮದುವೆ ಮಾಡಿಕೊಂಡಿದ್ದ ಸಂದೀಪ್-ಗೌರಿ ಮಂಗಳವಾರ ಬೆಳಗ್ಗೆ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಮಗ ಮನೆಗೆ ಬರುತ್ತಿದ್ದಂತೆ ಪಾಲಕರು ಇಬ್ಬರನ್ನೂ ಮನೆ ತುಂಬಿಸಿಕೊಂಡಿದ್ದಾರೆ. ಇತ್ತ ಹುಡುಗಿಯ ಪಾಲಕರ ಕಿರುಕುಳ ಹೆಚ್ಚಾಗುತ್ತಿದ್ದಂತೆ ಸಂದೀಪ್ ತನ್ನ ಪತ್ನಿ, ತಂದೆ-ತಾಯಿ ಹಾಗೂ ಸಹೋದರನ ಸಮೇತ ಬೆಳಗಾವಿ ಎಸ್‍ಪಿ ಕಚೇರಿಗೆ ಬಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಭದ್ರತೆ ನೀಡುವಂತೆ ಸಹಾಯ ಕೋರಿದರು.

ಪತ್ನಿಯ ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ನನ್ನ ಸಹೋದರ ಪ್ರದೀಪ್ ನನ್ನು ಠಾಣೆಗೆ ಕರೆಸಿ ಥಳಿಸಿದ್ದಾರೆ ಎಂದು ಸಂದೀಪ್ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *