ತಪ್ಪು ಮಾಡಿದ್ರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗೋಕೆ ಸಿದ್ಧ- ಡಿ.ಕೆ ಶಿವಕುಮಾರ್

ರಾಮನಗರ: ಸಿಬಿಐ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲು ಸಿದ್ಧ ಎಂದು ವೈದ್ಯಕೀಯ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹವಾಲ ಹಣ ಕುರಿತಂತೆ ನಮ್ಮ ಪಿಎ ಗಳನ್ನ ಕರೆದು ವಿಚಾರಣೆ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ಯಾರೋ ಫೋನ್ ಮಾಡಿ ನೀವು ಹಾಗೂ ಸುರೇಶ್ ಜಾಮೀನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ ಅಂದ ಮೇಲೆ ಜಾಮೀನು ಏಕೆ ಪಡೆದುಕೊಳ್ಳಲಿ? ಒಂದು ವೇಳೆ ತಪ್ಪು ಮಾಡಿದ್ರೆ ಪರಪ್ಪನ ಅಗ್ರಹಾರ ಜೈಲಿಗೆ ಬೇಕಾದರೂ ಹೋಗಲು ಸಿದ್ಧನಿದ್ದೇನೆ ಎಂದರು.

ಈಗ ಹವಾಲ ಹಣದ ವಿಚಾರ ಕುರಿತು ಪಕ್ಷದ ಹೈಕಮಾಂಡ್ ಗೆ ತಿಳಿಸಿದ್ದೇನೆ. ತಮ್ಮ ಪಕ್ಷದ ಮುಖಂಡರೊಬ್ಬರಿಗೆ ಕಿರುಕುಳ ನೀಡ್ತಿದ್ದಾರೆ ಅಂತಾ ಹೈಕಮಾಂಡ್ ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ ಎಂದರು.

ನೋಟು ಅಮಾನ್ಯವಾದಾಗ ಸಂಸದ ಸುರೇಶ್ ಬ್ಯಾಂಕ್ ಅಧಿಕಾರಿಗೆ ಫೋನ್ ಮಾಡಿ ಕೇವಲ 10 ಲಕ್ಷ ಹಣ ಬದಲಾವಣೆ ಮಾಡಿದ್ದಾರೆ. 10 ಲಕ್ಷ ಏನ್ ದೊಡ್ಡ ಮೊತ್ತನಾ? ಬಟ್ಟೆ ಒಡ್ಡಿದ್ದರೆ ನೀವೇ ಅಷ್ಟು ಹಣ ಹಾಕ್ತೀರಿ. ಅದನ್ನೇ ವಿರೋಧ ಪಕ್ಷ, ತಮ್ಮ ಪ್ರಭಾವ ಬಳಸಿ ನಮ್ಮನ್ನ ಸಿಲುಕಿಸಲು ಹುನ್ನಾರ ಮಾಡುತ್ತಿದೆ. ಅಲ್ಲದೇ ಸಂಸದ ಸುರೇಶ್ ಹೆಸರನ್ನ ಹೇಳಲು ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ 5 ರಂದು ನಡೆಯಲಿದೆ ಆದರೆ ನಾನು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ನಾನು ನಂಬಿದ ದೇವಾಲಯಕ್ಕೆ ತೆರಳಲಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೊಂದಾಣಿಕೆಯಾಗಿದ್ದು, ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಜೆಡಿಎಸ್ ನವರಿಗೆ ಇದರಿಂದ ಸಂಕಟವಾಗಬಹುದು ಎಂದರು.

ರಾಮನಗರ ಉಪಚುನಾವಣೆ ವಿಚಾರದಲ್ಲಿ ಪಕ್ಷ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳತ್ತೊ ತಿಳಿದಿಲ್ಲ. ಪಕ್ಷ ಸ್ಪರ್ಧೆ ಬೇಡ ಅನ್ನುತ್ತೋ ಅಥವಾ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೋ ತಿಳಿದಿಲ್ಲ ಎಂದರು.

Comments

Leave a Reply

Your email address will not be published. Required fields are marked *