ಸಿದ್ದರಾಮಯ್ಯ ಹೇಳಿಕೆಗೆ ಡೋಂಟ್ ಕೇರ್ ಅಂದ್ರು ದೇವೇಗೌಡರು!

ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾಗಿ ವೇಣುಗೋಪಾಲ್ ಇದ್ದಾರೆ. ವಿವಾದತ್ಮಕ ಹೇಳಿಕೆಗಳನ್ನೆಲ್ಲಾ ವೇಣುಗೋಪಾಲ್ ಹೆಗಲಿಗೆ ಹಾಕಿದ್ದು, ಅವರೇ ಸರಿದೂಗಿಸಿಕೊಂಡು ಹೋಗ್ತಾರೆ. ಆ ಎಲ್ಲ ಹೇಳಿಕೆಗಳಿಗೆ ನಾವು ಪ್ರತಿಕ್ರಿಯಿಸಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಜೆಪಿ ಭವನದಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾತನಾಡಿದ ದೇವೇಗೌಡರು, ನಮ್ಮ ಪಕ್ಷದ ಹಿರಿಯ ಮುಖಂಡರ ಸಭೆ ಕರೆದಿದ್ದೆ, ಎಲ್ಲರೂ ಹಿರಿಯ ನಾಯಕರು ಬಂದಿದ್ದಾರೆ. ಸರ್ಕಾರ ಮಾಡುವ ಸಂದರ್ಭ ದಲ್ಲಿ ನಮ್ಮ ಪಕ್ಷದ ಚಟುವಟಿಕೆ ಕಡಿಮೆ ಆಗಿತ್ತು. ಈ ಹಿನ್ನೆಲೆಯಲ್ಲಿ ಸಭೆಯನ್ನು ಕರೆದಿದ್ದು, ಮುಂದಿನ ದಿನಗಳಲ್ಲಿ ಸಭೆ ಮುಂದುವರೆಯುತ್ತದೆ. ಮೈತ್ರಿ ಸರ್ಕಾರ ಮುಂದುವರೆಸುವದಕ್ಕಾಗಿ ಈ ಸಭೆ ಮಾಡಲಾಗಿತ್ತು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನ ಮಾಡಬೇಕು. ಮೈತ್ರಿ ಸರ್ಕಾರ ಮುಂದುವರೆಯುವುದಕ್ಕೆ ಎಲ್ಲ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಲೋಕಾಲ್ ಪಾರ್ಟಿಸ್ ಎಲೆಕ್ಷನ್ ನಲ್ಲಿ ನಮ್ಮ ಪಕ್ಷದ ಸಂಘಟನೆ ಮಾಡೋದಕ್ಕಾಗಿ ಚರ್ಚೆ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಕೆಲಸವನ್ನು ಗುರುತಿಸಿದ್ದೇವೆ. ಅಂತಹವರನ್ನೇ ಇಂದಿನ ಸಭೆಗೆ ಆಹ್ವಾನಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಎಷ್ಟು ಕ್ಷೇತ್ರಗಳ ಬಗ್ಗೆ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ರು.

ಸಭೆಯಲ್ಲಿ ಸಚಿವ ಎಂಸಿ ಮನಗೂಳಿ, ಕೋನರೆಡ್ಡಿ, ಕುಪೇಂದ್ರ ರೆಡ್ಡಿ, ಮಾಜಿ ಶಾಸಕ ಸುರೇಶ್ ಪ್ರಭು, ಜೆಡಿಎಸ್ ವಕ್ತಾರ ರಮೇಶ್ ಬಾಬು, ಶರವಣ, ಬಿ.ಎಂ.ಫಾರೂಕ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ. ಸಿದ್ದರಾಮಯ್ಯ ಹೇಳಿಕೆಗೆ ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಿರುಗೇಟು ನೀಡಿದ್ದು, ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಈ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದೆ ಅಂತ ಹೇಳಿದ್ದಾರೆ. ಮತ್ತೊಂದೆಡೆ, ಸಿದ್ದರಾಮಯ್ಯ ಹೇಳಿಕೆಗೆ ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೋ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇತ್ತ ಸಿದ್ದರಾಮಯ್ಯರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೂರು ನೀಡಿದ್ದಾರೆ. ಎಐಸಿಸಿ ಮುಖಂಡರಿಬ್ಬರ ಜೊತೆ ದೂರವಾಣಿ ಮಾತುಕತೆ ನಡೆಸಿರುವ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸೇರಿದಂತೆ, ಕೆಲ ಕಾಂಗ್ರೆಸ್ ನಾಯಕರು ಮಾತನಾಡುವ ರೀತಿ ಸರಿ ಇಲ್ಲ ಅಂತ ದೂರಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Comments

Leave a Reply

Your email address will not be published. Required fields are marked *