ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

ಮಡಿಕೇರಿ: ಮೊಬೈಲ್‍ನಲ್ಲಿ ಸೆಲ್ಫಿ ಮೂಲಕ ನೀರಿನ ತೀವ್ರತೆ ಫೋಟೋ ತಗೆಯಲು ಹೋಗಿ ಯುವಕನೊಬ್ಬ ಜಲಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಸೋಮವಾರಪೇಟೆ ಸಮೀಪದ ಮಲ್ಲಳ್ಳಿ ಫಾಲ್ಸ್ ನಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದ ಮನೋಜ್ (24) ಮೃತ ಯುವಕ. ಶುಕ್ರವಾರ ಮನೋಜ್ ತನ್ನ 6 ಜನ ಸ್ನೇಹಿತರೊಂದಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿಗೆ ಮದುವೆ ರಿಸಪ್ಷನ್ ಗೆಂದು ಹೋಗಿ, ಮರಳುತ್ತಿರುವಾಗ ಘಟನೆ ಸಂಭವಿಸಿದೆ.

ಮನೋಜ್ ತನ್ನ 6 ಜನ ಸ್ನೇಹಿತರೊಂದಿಗೆ ಬೈಕಿನಲ್ಲಿ ಶಾಂತವಳ್ಳಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ. ಅಲ್ಲಿಂದ ಮರಳುತ್ತಿರುವಾಗ ಮಲ್ಲಳ್ಳಿ ಫಾಲ್ಸ್ ನೋಡಿಕೊಂಡು ಬರುವುದಾಗಿ ಸ್ನೇಹಿತರು ನಿರ್ಧರಿಸಿದ್ದರು. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜಲಪಾತ ಮನಮೋಹಕವಾಗಿ ಕಂಡಿದ್ದು, ಆ ದೃಶ್ಯವನ್ನು ಸೆಲ್ಫಿ ಮೂಲಕ ಸೆರೆ ಹಿಡಿಯಲು ಮನೋಜ್ ಮುಂದಾಗಿದ್ದನು. ಉಳಿದ ಸ್ನೇಹಿತರು ಅಲ್ಲಿಗೆ ಹೋಗದಂತೆ ಹೇಳಿದ್ದರೂ ಅದನ್ನು ಲೆಕ್ಕಿಸದೆ ಮನೋಜ್ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದನು. ಪರಿಣಾಮ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದನು. ಜಲಪಾತಕ್ಕೆ ಬಿಳ್ಳುತ್ತಿದ್ದಂತೆ ಮನೋಜ್ ದೇಹ ಕಾಣದಂತಾಗಿತ್ತು.

ಮನೋಜ್ ಪೋಷಕರು ಘಟನಾ ಸ್ಥಳಕ್ಕೆ ಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು, ದೇಹವನ್ನು ಹುಡುಕಲು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಲ್ಲೇ ಇವೆ. ಅಪಾಯವಿರುವ ಜಾಗಕ್ಕೆ ತೆರಳದಂತೆ ಸೂಚನ ಫಲಕ ಹಾಕಿದ್ದರೂ ಪ್ರವಾಸಿಗರು ಅನುಸರಿಸದೆ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ.

 

Comments

Leave a Reply

Your email address will not be published. Required fields are marked *