ದೇವರ ಪ್ರತಿಷ್ಠಾಪನೆ ತಡೆಯೋಕೆ ಬಾಂಬ್ ತಯಾರಿಕಾ ಸಾಮಾಗ್ರಿಗಳನ್ನಿಟ್ರಾ ಕಿಡಿಗೇಡಿಗಳು?

ಚಿಕ್ಕಬಳ್ಳಾಪುರ: ಬಾಂಬ್ ತಯಾರಿಕೆಯಲ್ಲಿ ಬಳಸುವ ಜಿಲೆಟಿನ್ ಕಡ್ಡಿ ಹಾಗೂ ಡಿಟೈನರ್ ಪತ್ತೆಯಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೊಡದವಾಡಿ ಗ್ರಾಮದಲ್ಲಿ ನಡೆದಿದೆ.

ಕೊಡದವಾಡಿ ಗ್ರಾಮದ ಸುರೇಶ್ ಎಂಬವರ ಕಿರಾಣಿ ಅಂಗಡಿ ಬಳಿ ಇಂದು ವಾರಸುದಾರರಿಲ್ಲದ ಬಾಕ್ಸ್ ವೊಂದು ಪತ್ತೆಯಾಗಿದೆ. ಕುತೂಹಲದಿಂದ ತೆಗೆದ ನೋಡಿದ ಗ್ರಾಮಸ್ಥರಿಗೆ ಬಾಕ್ಸ್ ನಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆಯಲ್ಲಿ ಬೃಹತ್ ಬಂಡೆಗಳನ್ನು ಸ್ಫೋಟಿಸಲು ಬಳಸುವ ಜಿಲೆಟಿನ್ ಕಡ್ಡಿ ಚೀಟಿಯೊಂದು ಕಂಡಿದೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಕ್ಸ್ ನಲ್ಲಿದ್ದ ಸ್ಫೋಟಕ ವಸ್ತುಗಳು ಹಾಗೂ ಚೀಟಿಯೊಂದನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಚೀಟಿಯಲ್ಲಿ ಅದೇ ಗ್ರಾಮಸ್ಥರ 37 ಮಂದಿಯ ಹೆಸರು ಪತ್ತೆಯಾಗಿದೆ.

37 ಮಂದಿ ಗ್ರಾಮಸ್ಥರು ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ದ್ವೇಷದಿಂದ ಕೆಲ ಕಿಡಿಗೇಡಿಗಳು ಪ್ರಕರಣದಲ್ಲಿ ಪ್ರಮುಖ ಗ್ರಾಮಸ್ಥರನ್ನು ಸಿಕ್ಕಿ ಹಾಕಿಸುವ ಉದ್ದೇಶದಿಂದ ಈ ಕೃತ್ಯ ಮಾಡಿರುವುದಾಗಿ ತಿಳಿದು ಬಂದಿದೆ.

ಜೂನ್ 23 ಮತ್ತು 24ರಂದು ಲಕ್ಷ್ಮೀನಾರಾಯಣ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯ ರದ್ದು ಮಾಡಬೇಕು ಎಂದು ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ನಾಗೇಶ್ ರವರು ಸ್ಫೋಟದ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸುರೇಶ್ ಅವರು ನೀಡಿದ ದೂರಿನನ್ವಯ ತನಿಖೆ ಮುಂದುವರೆಸಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿಯವರೂ ಸಹ ಸ್ಫೋಟಕ ಸಾಮಗ್ರಿಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *