ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ರಚನೆಯಾಗಿದ್ದ ಪಿಡಿಪಿ(ಪೀಪಲ್ ಡೆಮೋಕ್ರೇಟಿಕ್ ಪಾರ್ಟಿ) ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಮುರಿದು ಬಿದ್ದಿದೆ.

ದೆಹಲಿಯ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರವರು “ದೇಶದ ಭದ್ರತೆಯ ದೃಷ್ಟಿಯಿಂದ ನಾವು ಕಣಿವೆ ರಾಜ್ಯದಲ್ಲಿ ಮೈತ್ರಿಯಿಂದ ಹಿಂದೆ ಸರಿಯುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ವರಿಷ್ಠ ನಾಯಕರ ಜೊತೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚುತ್ತಿದೆ. ರಾಜ್ಯದ ಜನತೆಯ ಮೂಲಭೂತ ಹಕ್ಕು ಅಪಾಯದಲ್ಲಿದೆ. ಇತ್ತೀಚೆಗೆ ನಡೆದ ಪತ್ರಕರ್ತ ಶುಜಾತ್ ಬುಖರಿ ಹಾಗೂ ಸೇನೆಯ ಔರಂಗಜೇಬ್ ಸೈನಿಕನ ಹತ್ಯೆಯಿಂದ ಕಣಿವೆ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಜನ ದಂಗೆ ಎದ್ದಿದ್ದಾರೆ ಎಂದು ಹೇಳಿದರು.

ಕಣಿವೆ ರಾಜ್ಯದಲ್ಲಿ ಸೂಕ್ತ ಹಿಡಿತ ಸಾಧಿಸಲು ಹಾಗೂ ಭದ್ರತೆಯ ದೃಷ್ಠಿಯಿಂದ ರಾಜ್ಯಪಾಲರ ಆಳ್ವಿಕೆಯೊಂದೇ ಪರಿಹಾರವಾಗಿದೆ. ಹೀಗಾಗಿ ರಾಜ್ಯಪಾಲರ ಆಳ್ವಿಕೆಗೆ ಬಿಜೆಪಿ ಆಗ್ರಹಿಸುತ್ತಿದೆ ಎಂದು ರಾಮ್ ಮಾಧವ್ ತಿಳಿಸಿದರು.

2014ರ ಚುನಾವಣೆಯಲ್ಲಿ 87 ಕ್ಷೇತ್ರಗಳಿದ್ದ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ 28 ಸ್ಥಾನಗಳಿಸಿದ್ದ ಪಿಡಿಪಿ ಮತ್ತು 25 ಸ್ಥಾನಗಳಿಸಿದ್ದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿಯ ದಿಢೀರ್ ನಿರ್ಧಾರದಿಂದ ಅಧಿಕಾರದಲ್ಲಿದ್ದ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರವು ಪತನವಾಗಿದೆ.

 

Comments

Leave a Reply

Your email address will not be published. Required fields are marked *