ನಾನು ಯಾರ ಫೋನ್ ರಿಸೀವ್ ಮಾಡಲ್ಲ, ನನಗೆ ರೆಸ್ಟ್ ಮುಖ್ಯ: ಮಾಜಿ ಸಿಎಂ ಸಿದ್ದರಾಮಯ್ಯ ನೋ ರಿಯಾಕ್ಷನ್

ಬೆಂಗಳೂರು: ಆರೋಗ್ಯ ಚೇತರಿಕೆ ದೃಷ್ಟಿಯಿಂದ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷದ ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿರುವ ಸಿದ್ದರಾಮಯ್ಯ ಅವರು ಸದ್ಯ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಹಲವು ಪಕ್ಷದ ನಾಯಕರು ಸೇರಿದಂತೆ ಶಾಸಕರು ಬಜೆಟ್ ಕುರಿತ ಸಿದ್ದರಾಮಯ್ಯ ಅವರ ಅನಿಸಿಕೆ ಪಡೆಯಲು ನಿರಂತರವಾಗಿ ಸಂಪರ್ಕ ಮಾಡುತ್ತಿದ್ದು, ಆದರೆ ಯಾವ ನಾಯಕರ ಕರೆಗೂ ಪ್ರತಿಕ್ರಿಯೇ ನೀಡದ ಸಿದ್ದರಾಮಯ್ಯ ಅವರು, ಯಾರು ಕರೆ ಮಾಡಿದರು ನನಗೆ ಕೊಡಬೇಡಿ. ನನಗೆ ರೆಸ್ಟ್ ಬೇಕು, ಸದ್ಯ ನನಗೆ ಆರೋಗ್ಯವೇ ಮುಖ್ಯ ಎಂದು ಹೇಳಿದ್ದಾಗಿ ತಿಳಿದು ಬಂದಿದೆ. ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಕಾಂಗ್ರೆಸ್ ನಾಯಕರು ಅಚ್ಚರಿಗೊಂಡಿದ್ದಾರೆ ಎನ್ನಲಾಗಿದೆ.

ಧರ್ಮಸ್ಥಳಕ್ಕೆ ತೆರಳುವ ಮುನ್ನ ಮಾತನಾಡಿದ್ದ ಸಿದ್ದರಾಮಯ್ಯ ಅವರು ಪ್ರತ್ಯೇಕ ಬಜೆಟ್ ಮಂಡನೆ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರದಲ್ಲಿ ಹಲವು ಗೊಂದಲ ಉಂಟಾಗಿತ್ತು. ಅಲ್ಲದೇ ಸ್ವತಃ ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರು ಬಜೆಟ್ ಮಂಡನೆಗೆ ಒಪ್ಪಿಗೆ ಸೂಚಿಸಿದ್ದರು. ಇದಾದ ಬಳಿಕ ಉಂಟಾದ ಬೆಳವಣಿಗೆಗಳಿಂದ ಸಿದ್ದರಾಮಯ್ಯ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ಸಚಿವ ಜಾರ್ಜ್ ಕಾರ್ ಗಿಫ್ಟ್ ಬೆನ್ನಲ್ಲೇ ಸಿದ್ದರಾಮಯ್ಯಗೆ ಡಬಲ್ ಆಫರ್!

ದೆಹಲಿ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಸಿದ್ದರಾಮಯ್ಯ ಅವರ ಹೇಳಿಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಉಂಟಾಗಿರುವ ಗೊಂದಲದ ಕುರಿತು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರ್ಟ್ ಸೂಚನೆ

ಸಿದ್ದರಾಮಯ್ಯ ಅವರು ಚಿಕಿತ್ಸೆ ಪೂರ್ಣಗೊಂಡ ಬಳಿಕ ಜೂನ್ 29 ರಂದು ಬೆಂಗಳೂರಿಗೆ ಹಿಂದಿರುಗಲಿದ್ದು, ಬಳಿಕ ಬಜೆಟ್ ಕುರಿತು ಅವರ ನಡೆ ಬದಲಾಗುತ್ತಾ? ಅಥವಾ ಹಾಗೆಯೇ ಇರುತ್ತಾ? ಎಂಬುವುದು ಕುತೂಹಲ ಮೂಡಿಸಿದೆ.

Comments

Leave a Reply

Your email address will not be published. Required fields are marked *