11 ಬಾರಿ ಶಾಸಕನಾದ ನನಗೆ ಸಿಎಂ ಸ್ಥಾನ ಸಿಗಲಿಲ್ಲ: ಖರ್ಗೆ ಅಸಮಾಧಾನ

ಬೀದರ್: ನಾನು 11 ಬಾರಿ ಶಾಸಕನಾಗಿ ಗೆಲುವು ಸಾಧಿಸಿದ್ದರೂ ಸಿಎಂ ಸ್ಥಾನ ಸಿಗಲಿಲ್ಲ. ನನಗೆಷ್ಟು ನೋವು ಆಗಿರಬಹುದು ಎಂದು ಲೋಕಸಭೆಯ ಕಾಂಗ್ರೆಸ್ಸಿನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೀದರ್ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಸಚಿವ ರಾಜಶೇಖರ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಸಿಗದ್ದಕ್ಕೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು.

ಸಚಿವ ಸ್ಥಾನ ವಂಚಿತರಿಗೆ ಸಲಹೆ ನೀಡುತ್ತ ಮಾತನಾಡಿದ ಅವರು, ಕೆಲವರಿಗೆ ಸಮಯಾನುಸಾರ ಸಿಗುತ್ತದೆ, ಇನ್ನು ಕೆಲವೊಮ್ಮೆ ಸಿಗುವುದೇ ಇಲ್ಲ. ರಹೀಂಖಾನ್ ಹಾಗೂ ಈಶ್ವರ್ ಖಂಡ್ರೆಗೆ ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ನಿಮಗೆ ಬೇಸರವಾಗಿರಬಹುದು. ಆದರೆ ನಾನು 11 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಒಮ್ಮೆಯೂ ನನಗೆ ಸಿಎಂ ಸ್ಥಾನ ಸಿಗಲಿಲ್ಲ. ನನಗೆ ಎಷ್ಟು ನೋವು ಆಗಿರಬಹುದು. ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಆಗಲಾದರೂ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಆರ್ ಎಸ್‍ಎಸ್ ಧೋರಣೆಗಳನ್ನು ದೂರವಿಡಬೇಕು ಎನ್ನುವ ಆಲೋಚನೆಯಿಂದ ಮೈತ್ರಿ ಸರ್ಕಾರಕ್ಕೆ ಮುಂದಾಗಿದ್ದೇವೆಯೇ ಹೊರತು ನಮ್ಮ ಖುಷಿಗಾಗಿ ಅಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಣಾಳಿಕೆ ಪ್ರಕಾರ ಕೆಲಸ ಮಾಡಿದೆ. ಆದರೆ ಮತದಾರರು ಯಾಕೆ ಇಂತಹ ಶಿಕ್ಷೆ ಕೊಟ್ಟಿದ್ದಾರೆಂದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.

ಸಚಿವ ಸ್ಥಾನ ವಂಚಿತ ಶಾಸಕ ಈಶ್ವರ್ ಖಂಡ್ರೆ ಗೈರಾಗಿದ್ದರು. ಸಹಕಾರ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ, ಡಾ. ಚಂದ್ರಶೇಖರ ಪಾಟೀಲ ಹಾಗೂ ವಿಜಯಸಿಂಗ್, ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *