ತಾನೊಬ್ಬ ಎಸ್ಪಿ ಅನ್ನೋದನ್ನೆ ಮರೆತು ಮಹತ್ವದ ಕೆಲಸ ಮಾಡಿದ್ರು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ!

ಚಿಕ್ಕಮಗಳೂರು: ಕಳೆದೊಂದು ವಾರದ ಹಿಂದೆ ಕಾಫಿನಾಡಿನ ಚಾರ್ಮಾಡಿ ಘಾಟ್‍ನಲ್ಲಿ ಸುರಿದ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನಲ್ಲಿ ಮೂರು ದಿನಗಳ ಕಾಲ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು.

ಭಾರೀ ಮಳೆ-ಗಾಳಿಯಿಂದ ಚಾರ್ಮಾಡಿಯಲ್ಲಿ ಸುಮಾರು ಒಂಬತ್ತು ಗುಡ್ಡಗಳು ಕುಸಿದು ಮಣ್ಣು ರಸ್ತೆಗೆ ಹರಡಿ ಸಂಚಾರ ಮಾಡದಂತಾಗಿತ್ತು. ಸುಮಾರು 18 ಗಂಟೆಗಳ ಕಾಲ ಜನ ಸುರಿಯೋ ಮಳೆಯಲ್ಲೇ ಊಟ-ತಿಂಡಿ ಇಲ್ಲದೆ ನಿಂತಲ್ಲೇ ನಿಲ್ಲುವಂತಹಾ ಸ್ಥಿತಿ ನಿರ್ಮಾಣವಾಗಿತ್ತು.

ಚಾರ್ಮಾಡಿಯಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ, ಜನ ಮಳೆಯಲ್ಲಿ ಸಿಕ್ಕಿಬಿದ್ದಿದ್ದಾಗ ಸ್ಥಳಕ್ಕೆ ಬಂದ ಎಸ್ಪಿ ಅಣ್ಣಾಮಲೈ ತಾನೊಬ್ಬ ಎಸ್ಪಿ ಎನ್ನುವುದನ್ನೇ ಮರೆತು ಕೆಲಸಗಾರರ ಜೊತೆ ಕೆಲಸಗಾರರಾಗಿ ಕುಸಿದಿದ್ದ ಮಣ್ಣನ್ನು ಸರಿಸೋಕೆ ಮುಂದಾದರು.

ಎಸ್ಪಿಯ ಶೈಲಿಯನ್ನು ಪ್ರದರ್ಶಿಸದೇ ಕೆಲಸಗಾರರೊಂದಿಗೆ ಮರದ ಟೊಂಗೆಗಳನ್ನು ಎತ್ತಿ ಹಾಕಿದ್ದರು. ಸುರಿಯೋ ಮಳೆಯನ್ನೂ ಲೆಕ್ಕಿಸದೆ ಸ್ಪಾಟ್‍ನಲ್ಲಿ ನಿಂತು ಟ್ರಾಫಿಕ್ ಕ್ಲಿಯರ್ ಮಾಡಿದರು. ಎಸ್ಪಿಯ ಗನ್ ಮ್ಯಾನ್ ಛತ್ರಿ ಹಿಡಿದು ಎಸ್ಪಿಯ ಹಿಂದಿನಿಂದ ಬಂದರೂ ಛತ್ರಿಯನ್ನ ಬೇಡವೆಂದು ಎಸ್ಪಿ ಮೊಣಕಾಲುದ್ದ ಕೆಸರಿನ ಮಧ್ಯೆಯೂ ಟ್ರಾಫಿಕ್ ಕ್ಲಿಯರ್ ಮಾಡಲು ಮುಂದಾದರು.

ಇದನ್ನೆಲ್ಲಾ ಗಮನಿಸಿದ ಸ್ಥಳಿಯರು, ಕೆಲಸಗಾರರು, ವಾಹನ ಸವಾರರು ಎಸ್ಪಿ ಎಂದರೆ ಹೀಗಿರಬೇಕು ಎಂದು ಹೇಳಿದ್ದಾರೆ. ಸದ್ಯ ಅಣ್ಣಮಲೈ ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *