ಇನ್ನು ಒಂದು ವರ್ಷ ಯಾರೂ ನನ್ನ ಟಚ್ ಮಾಡೋಕೆ ಆಗಲ್ಲ: ಸಿಎಂ ಎಚ್‍ಡಿಕೆ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಇರುತ್ತದೆ. ಮುಂದಿನ ಲೋಕಸಭೆ ಚುನಾವಣೆವರೆಗೆ ನನ್ನನ್ನು ಯಾರು ಟಚ್ ಮಾಡೋಕೆ ಆಗಲ್ಲ. ಈ ವಿಚಾರ ನನಗೆ ಗೊತ್ತು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಲೆಕ್ಕ ಪರಿಶೋಧಕರ ಸಮಾವೇಶ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ, ನಾನು ಒಂದು ವರ್ಷವಾದರೂ ಅಧಿಕಾರದಲ್ಲಿ ಇರುತ್ತೇನೆ. ಅಲ್ಲಿವರೆಗೂ ನನ್ನನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ. ಅಲ್ಲಿವರೆಗೂ ನಾನು ಸುಮ್ಮನೆ ಸಮಯ ವ್ಯರ್ಥ ಮಾಡಲ್ಲ. ಸಿಕ್ಕಿರುವ ಅವಕಾಶದಲ್ಲಿ ಒಂದೊಂದು ಕ್ಷಣನೂ ನಾನು ಏನು ತೀರ್ಮಾನ ಮಾಡಬೇಕು ಎಂದು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ನನಗೆ ನನ್ನ ರಾಜ್ಯದ ಅಭಿವೃದ್ಧಿ ಮುಖ್ಯ. ಈ ಸರ್ಕಾರ ಕೇವಲ ಗ್ರಾಮೀಣ ಪ್ರದೇಶದ ಪರವಾಗಿರುತ್ತದೆ. ರೈತರ ಸಾಲಮನ್ನಾ ಕಮಿಟ್ ಮೆಂಟ್ ನಿಂದ ಯಾವುದೇ ಕಾರಣಕ್ಕೂ ಎಸ್ಕೇಪ್ ಆಗೊಲ್ಲ ಅಂತ ಹಾಗೇ ಸಾಲ ಮನ್ನಾ ಮಾಡೋದು ಹೇಗೆ ಅಂತಾ ನನಗೆ ಗೊತ್ತು. ಈಗಾಗಲೇ ರೈತರ ಸಾಲಮನ್ನಾ ಬಗ್ಗೆ ಬ್ಯಾಂಕ್ ಮುಖ್ಯಸ್ಥರ ಜೊತೆ ಸಭೆ ಮಾಡಿದ್ದೇನೆ. ಆರ್ಥಿಕ ಶಿಸ್ತಿಗೆ ಧಕ್ಕೆ ಆಗದಂತೆ, ನಿಯಮಗಳ ಒಳಗೆ ಸಾಲಮನ್ನಾ ಮಾಡ್ತೀನಿ. ನಾನು ಹೆದರಿ ಓಡಿ ಹೋಗೊಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಜುಲೈ ಮೊದಲ ವಾರ ಬಜೆಟ್ ಮಂಡನೆ ಮಾಡೋ ಯೋಚನೆ ಇದೆ. ಇನ್ನು ಕೆಲವರು ಬಜೆಟ್ ಮಂಡನೆ ಮಾಡಿದರೆ ಎಲ್ಲಿ ಕುಮಾರಸ್ವಾಮಿ ಹೆಸರು ಮಾಡುತ್ತಾರೆ ಅನ್ನೋ ಚಿಂತೆಯಲ್ಲಿದ್ದಾರೆ. ಆದರೆ ಹೊಸ ಸರ್ಕಾರವಾಗಿ ಹೊಸ ಕಾರ್ಯಕ್ರಮ ನೀಡಲು ಬಜೆಟ್ ಮಂಡಿಸಬೇಕು ಎಂದು ಹೆಸರು ಹೇಳದೆ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಹಣಕಾಸು ಸಚಿವನಾಗಿ ಹೇಳುತ್ತಿದ್ದೇನೆ. ನಾನು ಏನು ಹೇಳಿದ್ದೇನೋ ಅದನ್ನ ಮಾಡೇ ಮಾಡುತ್ತೇನೆ. ರೈತ ಸಾಲಮನ್ನಾ ಮಾಡಲು ಕಾಂಗ್ರೆಸ್, ನಾವು ತಯಾರು ಇದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಜನರ ಮುಂದೆ ಹೇಳಿದ ಎಲ್ಲಾ ಕಾರ್ಯಕ್ರಮ ಜಾರಿಗೆ ತರುತ್ತೇನೆ. ಕಾಂಗ್ರೆಸ್ ಕಾರ್ಯಕ್ರಮಗಳು ಕೂಡಾ ಜಾರಿಗೆ ತರುತ್ತೇವೆ. ರೈತರ ಸಾಲಮನ್ನಾ ಮಾಡೋದು ಗ್ಯಾರಂಟಿ. ಅದಕ್ಕಾಗಿ ಹಣ ಕ್ರೋಢೀಕರಣ ಮಾಡುತ್ತಿದ್ದೇನೆ ಅಂತ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *