ಯಾರನ್ನು ದೂರಲ್ಲ, ಕಡಿಮೆ ಅಂತರದಿಂದ ಸೋತಿದ್ದೇವೆ: ಬಿಎಸ್‍ವೈ

ಬೆಂಗಳೂರು: ಜಯನಗರ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿರುವ ಬಗ್ಗೆ ಯಾರನ್ನು ದೂರುವುದಿಲ್ಲ ಎಂದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ನಡೆದ ಜಯನಗರ ಕ್ಷೇತ್ರದ ಚುನಾವಣೆಯಲ್ಲಿ ಇನ್ನೂ ಸರಿಯಾದ ತಂತ್ರವನ್ನು ನಾವು ಬಳಸಬೇಕಿತ್ತು. ಯಾವುದೇ ಪಾಲಿಕೆ ಸದಸ್ಯರಾಗಲಿ ಹಾಗೂ ಮುಖಂಡರುಗಳಾಗಲಿ ಪಕ್ಷದ ವಿರುದ್ಧ ಕೆಲಸ ಮಾಡಿಲ್ಲ ಎಂದರು.

ಕಾರ್ಯಕರ್ತರು ಹಾಗೂ ಬೆಂಬಲಿಗರು ಶ್ರಮವಹಿಸಿ ಪಕ್ಷಕ್ಕಾಗಿ ದುಡಿದಿದ್ದಾರೆ. ಇವರ ಶ್ರಮಕ್ಕೆ ನಾವು ಕಡಿಮೆ ಅಂತರದಿಂದ ಸೋತಿದ್ದು ಬೇಸರ ತಂದಿದೆ. ಬಿಜೆಪಿಗೆ ಮತ ನೀಡಿದ ಎಲ್ಲಾ ಮತದಾರರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಎಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳು ರಾಜ್ಯದಲ್ಲಿ 5 ವರ್ಷಗಳಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಹೇಳಿಕೆಯನ್ನು ನೀಡಬಾರದಿತ್ತು. ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂದು ಹೇಳಿರುವ ಮುಖ್ಯಮಂತ್ರಿಗಳು ಹೇಗೆ ಅಧಿಕಾರ ನಿರ್ವಹಿಸುತ್ತಾರೆ ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನ ಅಧಿಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಒಂದು ವೇಳೆ ಆಗಿದ್ದರೆ ಅಧಿಕಾರದಲ್ಲಿರುವ ನೀವು ಅದಕ್ಕೆ ಸೂಕ್ತ ಕ್ರಮತೆಗೆದುಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ. ಇಬ್ಬರ ಈ ಹೇಳಿಕೆಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ನಡುವಿನ ಅಸಮಾಧಾನವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮುಖ್ಯಮಂತ್ರಿಯಾದ ಅವರು ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಬೇಕೇ ಹೊರತು ಹತಾಶೆಯ ಮಾತುಗಳನ್ನು ಆಡಬಾರದು ಎಂದು ಹೇಳಿದರು. ಇದನ್ನೂ ಓದಿ : ಮೌನಕ್ಕೆ ಶರಣಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ

ಚುನಾವಣಾ ಸಂದರ್ಭ ನೀಡಿದ್ದ ಆಶ್ವಾಸನೆಗಳನ್ನು ಮೊದಲು ಈಡೇರಿಸಿ ಹಾಗೂ ರೈತರ ಸಾಲ ಮನ್ನಾ ಕುರಿತು ಕುಮಾರಸ್ವಾಮಿಯವರು ಮಾಹಿತಿ ನೀಡಬೇಕು. ಸಾಲಮನ್ನಾ ವಿಚಾರ 15 ದಿನ ಕಾದು ನೋಡಿ ಮುಂದಿನ ಹೋರಾಟವನ್ನು ನಡೆಸಲಾಗುವುದು ಎಂದು ಬಿಎಸ್‍ವೈ ತಿಳಿಸಿದರು.

Comments

Leave a Reply

Your email address will not be published. Required fields are marked *