ಬೆಂಗಳೂರಿಗೂ ಕಾಲಿಟ್ಟ ಚಡ್ಡಿ ಗ್ಯಾಂಗ್ – ಅರೆಬೆತ್ತಲಾಗಿ ಬಂದು ಕಳ್ಳತನ ಮಾಡ್ತಾರೆ – ವಿಡಿಯೋ ನೋಡಿ

ಬೆಂಗಳೂರು: ದಂಡುಪಾಳ್ಯ ಗ್ಯಾಂಗ್ ಬಳಿಕ ನಗರಕ್ಕೆ ಮತ್ತೊಂದು ಕಳ್ಳರ ಗ್ಯಾಂಗ್ ಕಾಲಿಟ್ಟಿದೆ. ಅರೆಬೆತ್ತಲಾಗಿ ಲಾಂಗು, ಮಚ್ಚು ಹಿಡಿದು, ಮೈಗೆ ಎಣ್ಣೆ ಹಚ್ಚಿಕೊಂಡು ಗ್ಯಾಂಗ್‍ವೊಂದು ಕಳ್ಳತನಕ್ಕೆ ಯತ್ನಿಸಿರುವ ಪ್ರಕರಣಗಳು ನಗರದ ಹೊರವಲಯದ ಬನ್ನೇರುಘಟ್ಟ ಸುತ್ತಮುತ್ತಲಿನ ಪ್ರದೇಶದ ಮನೆಗಳಲ್ಲಿ ನಡೆದಿದೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಮುಸುಕುದಾರಿ ಗ್ಯಾಂಗ್ ಅರೆಬೆತ್ತಲಾಗಿ ಆಗಮಿಸಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬನ್ನೇರುಘಟ್ಟ, ಜಿಗಣಿ ಕೈಗಾರಿಕ ಪ್ರದೇಶದಲ್ಲಿ ಗ್ಯಾಂಗ್ ಕಾಣಿಸಿಕೊಂಡಿದ್ದು ಹೊರವಲಯದ ಮನೆಗಳ ಬಳಿ ಕಳ್ಳತನಕ್ಕೆ ಬಂದು ವಿಫಲ ಯತ್ನ ನಡೆಸಿ ವಾಪಸ್ಸಾಗಿದೆ. ಬನ್ನೇರುಘಟ್ಟ, ಸಕಲವಾರ, ಮಂಟಪಾ ಗ್ರಾಮಗಳ ಕೆಲ ಮನೆಗಳಿಗೆ ಕಳ್ಳತನಕ್ಕೆಂದು ಬಂದ ಗ್ಯಾಂಗ್‍ನ ಚಲನವಲನಗಳು ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಜೂನ್ 7ರಂದು ನಡೆದಿದ್ದು, ಗ್ಯಾಂಗ್ ಬನ್ನೇರುಘಟ್ಟದ ಹಲವೆಡೆಗಳಲ್ಲಿ ಸಂಚರಿಸಿದ್ದ ಕಳ್ಳತನಕ್ಕೆ ಯತ್ನಿಸಿದೆ. ಸದ್ಯ ಸಿಸಿಟಿವಿ ದೃಶ್ಯ ಆಧಾರಿಸಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಗ್ಯಾಂಗ್ ಪತ್ತೆಗೆ ಈಗಾಗಲೇ ಪೊಲೀಸರು ಬಲೆ ಬೀಸಿದ್ದು ತಮಿಳುನಾಡು ಕಡೆಯಿಂದ ಈ ಗ್ಯಾಂಗ್ ಬಂದಿರಬಹುದು ಎಂಬ ಶಂಕೆ ಪೊಲೀಸ್ ವಲಯದಲ್ಲಿ ವ್ಯಕ್ತವಾಗಿದೆ.

ಇನ್ನು ಆನೇಕಲ್, ಅತ್ತಿಬೆಲೆ ಗಡಿಭಾಗ ಸೇರಿದಂತೆ ಈ ಗ್ಯಾಂಗ್ ಬಗ್ಗೆ ಪೊಲೀಸರು ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿದ್ದು ಅವರ ಚಲನವಲನ ಕಂಡು ಬಂದಲ್ಲಿ ಸೆರೆಹಿಡಿಯುವಂತೆ ಮಾಹಿತಿ ನೀಡಿದ್ದಾರೆ.

https://www.youtube.com/watch?v=zA1Y_tlISQQ

Comments

Leave a Reply

Your email address will not be published. Required fields are marked *