ಕಾಕ್ರೋಜ್‍ಗೆ ‘ಹೀರೋ’ ಕಾಟ!

ಅದೊಂದು ದಿನ ನಿರ್ದೇಶಕ ಸೂರಿ ಸುಧೀ ಅನ್ನೋ ಈ ಯುವಕನನ್ನು ಕರೆದು ‘ಟಗರು ಸಿನಿಮಾ ರಿಲೀಸಾದ ಮೇಲೆ ಜನ ನಿನ್ನ ಒರಿಜಿನಲ್ ಹೆಸರನ್ನೇ ಮರೆತುಬಿಡ್ತಾರೆ’ ಅಂತಾ ಭವಿಷ್ಯ ನುಡಿದಿದ್ದರಂತೆ. ಹೆಚ್ಚೂ ಕಮ್ಮಿ ಹಾಗೇ ಆಗಿದೆ ಸುಧೀ ಪಾಡು.

ಜಾಕಿ ಸಿನಿಮಾದಿಂದ ಹಿಡಿದು ಕನ್ನಡ ಬರುವ ಸಿನಿಮಾಗಳಲ್ಲಿ ಕಾಣಸಿಗುವ ಚಿತ್ರವಿಚಿತ್ರದ ಬೈಕುಗಳನ್ನು ವಿನ್ಯಾಸ ಮಾಡುವುದು ಇದೇ ಸುಧೀ. ಅಲ್ಲಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ನಿಭಾಯಿಸುತ್ತಾ ಬಂದಿದ್ದ ಸುಧೀಗೆ ಟಗರು ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಮಾಮೂಲಿಯಾಗಿ ಓಡಾಡುತ್ತಿದ್ದ ಸುಧೀ ಈಗ ಮುಖಕ್ಕೆ ಮಾಸ್ಕು, ಮಂಕಿ ಟೋಪಿ ಅಂತಾ ತಗಲಾಕಿಕೊಂಡು ಓಡಾಡೋ ಸಂದರ್ಭ ಒದಗಿ ಬಂದಿದೆ. ಟಗರು ರಿಲೀಸಾದ ಮೇಲೆ ಸುಧೀಗೆ ಒಳ್ಳೊಳ್ಳೆ ಸಿನಿಮಾಗಳ ಲೀಡ್ ಪಾತ್ರಗಳೂ ಹುಡುಕಿಕೊಂಡು ಬರುತ್ತಿದೆ.

ಯಾವುದೇ ಒಂದು ಹಿಟ್ ಸಿನಿಮಾದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡವರಿಗೆ ‘ನೀವು ಹೀರೋ ಆಗಿ’ ಅಂತಾ ಗಾಂಧಿನಗರದ ಜನ ಬೆನ್ನು ಬೀಳೋದು ಗ್ಯಾರೆಂಟಿ. ಹಾಗೆಯೇ ಸುಧೀಗೆ ಕೂಡಾ ಒಂದಷ್ಟು ಜನ ಹೀರೋ ಮಾಡ್ತೀವಿ ಅಂತಾ ಗಂಟು ಬಿದ್ದಿದ್ದಾರಂತೆ. ಆದರೆ ನವನಿರ್ದೇಶಕರುಗಳು ಬಂದು ಹೇಳುತ್ತಿರುವ ಬಹುತೇಕ ಪಾತ್ರಗಳು ಸೈಕೋ ಕ್ಯಾರೆಕ್ಟರುಗಳು ಮತ್ತು ಕಾಕ್ರೋಜ್ ಪಾತ್ರದ ಮುಂದುವರಿದಂತವೇ ಆಗಿವೆಯಂತೆ. ಹೀಗಾಗಿ ಬಲು ಎಚ್ಚರಿಕೆಯಿಂದ ಸಿನಿಮಾ ಒಪ್ಪಿಕೊಳ್ಳುತ್ತಿರುವ ಸುಧಾಕರ್ ತುಂಬಾ ಚೆಂದನೆಯ ಕತೆ ಹೊಂದಿರುವ ಒಂದೆರಡು ಸಿನಿಮಾಗಳಲ್ಲಿ ಮಾತ್ರ ಲೀಡ್ ರೋಲಲ್ಲಿ ನಟಿಸಲು ಒಪ್ಪಿದ್ದಾರಂತೆ. ಹಾಗೆ ಸುಧೀ ಹೀರೋ ಆಗಿ ನಟಿಸುತ್ತಿರುವ ಚಿತ್ರಗಳಲ್ಲಿ ಜಯತೀರ್ಥ ನಿರ್ದೇಶನದ ಸಿನಿಮಾ ಕೂಡಾ ಒಂದು. ‘ಇದು ನಿನಗೆಂದೇ ಸೃಷ್ಟಿಸಿದ ಪಾತ್ರದ ಥರಾ ಇದೆ ಮಾಡು’ ಅಂತಾ ಜಯಣ್ಣ ಹೇಳಿರೋದಕ್ಕೆ ಸುಧೀ ಎಸ್ ಅಂದಿದ್ದಾರಂತೆ. ತೀರಾ ನಾನು ಹೀರೋ ಅನ್ನಿಸಿಕೊಳ್ಳೋದಕ್ಕಿಂತಾ ಒಳ್ಳೇ ಪಾತ್ರಗಳು ಸಿಕ್ಕರೆ ಯಾವುದಾದರೂ ಮಾಡುತ್ತೀನಿ ಅನ್ನೋದು ಸುಧೀ ಮಾತು.

Comments

Leave a Reply

Your email address will not be published. Required fields are marked *