ಬುಧವಾರ ಅನಾವರಣಗೊಂಡಿದ್ದ ಕೊಹ್ಲಿಯ ಮೇಣದ ಪ್ರತಿಮೆಗೆ ಹಾನಿ

ನವದೆಹಲಿ: ಇಲ್ಲಿನ ಮೇಡಂ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಲ್ಲಿ ಅನಾವರಣಗೊಂಡಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಗೆ ಹಾನಿಯಾಗಿದೆ.

ಕೊಹ್ಲಿಯ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವ ವೇಳೆ ಮೇಣದ ಪ್ರತಿಮೆಯ ಬಲ ಕಿವಿಗೆ ಹಾನಿಯುಂಟಾಗಿದೆ. ಈಗ ಅದನ್ನು ಸರಿಪಡಿಸಲಾಗಿದ್ದು ವೀಕ್ಷಕರಿಗೆ ಅದು ಲಭ್ಯವಿದೆ ಎಂದು ವಸ್ತುಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಮೆಯನ್ನು ಕಳೆದ ಬುಧವಾರ ವಷ್ಟೇ ಅನಾವರಣಗೊಳಿಸಲಾಗಿತ್ತು. ಪ್ರತಿಮೆಗೆ ಹಾನಿಯಾದ ಕಾರಣದಿಂದಾಗಿ ಅನಾವರಣಗೊಂಡ ಒಂದು ದಿನದಲ್ಲಿಯೇ ಪ್ರತಿಮೆಯನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು.

ಕೊಹ್ಲಿ ಅವರ 200 ನಿರ್ದಿಷ್ಟ ಅಳತೆಗಳನ್ನು ಪಡೆದು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಏಕದಿನ ಮಾದರಿ ಕ್ರಿಕೆಟ್ ನಲ್ಲಿ ಧರಿಸುವ ಜರ್ಸಿ ಯೊಂದಿಗೆ ಅಭಿಮಾನಿಗಳು ಕೊಹ್ಲಿ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಮ್ಯೂಸಿಯಂ ನಲ್ಲಿ ಈಗಾಗಲೇ ಹಲವು ಬಾಲಿವುಡ್, ಹಾಲಿವುಡ್ ಹಾಗೂ ವಿವಿಧ ರಾಜಕೀಯ ವ್ಯಕ್ತಿಗಳ ಪ್ರತಿಮೆಗಳನ್ನು ಅನಾವರಣಗೊಳಿಸಲಾಗಿದೆ.

ಈಗಾಗಲೇ ಸಂಗ್ರಹಾಲಯದಲ್ಲಿ ಡೇವಿಡ್ ಬೇಕಮ್, ಲಿಯೋನೆಲ್ ಮೆಸ್ಸಿ, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಉಸೇನ್ ಬೋಲ್ಟ್ ರ ಮೇಣದ ಪ್ರತಿಮೆಗಳಿವೆ. ಈಗ ಅವರ ಸಾಲಿಗೆ ಕ್ರಿಕೆಟಿಗ ಕೊಹ್ಲಿ ಪ್ರತಿಮೆಯೂ ಸೇರಿದೆ. ಈ ಪ್ರತಿಮೆ ಭಾರತದ ಏಕದಿನ ಅಂತರಾಷ್ಟ್ರೀಯ ಪಂದ್ಯದ ಜರ್ಸಿಯನ್ನು ಧರಿಸಿದಂತೆ ನಿರ್ಮಾಣ ಮಾಡಲಾಗಿದ್ದು, 200 ಕ್ಕೂ ಹೆಚ್ಚು ಅಳತೆಯಲ್ಲಿ ರಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಈ ಸಾಧನೆಗೆ ತಮ್ಮನ್ನು ಪರಿಗಣಿಸಿದಕ್ಕೆ ಧನ್ಯವಾದ. ಇದಕ್ಕೆ ಕಾರಣರಾದ ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲಕ್ಕೆ ಚಿರಋಣಿಯಾಗಿರುತ್ತೇನೆ. ಇದನ್ನು ನನ್ನ ಜೀವಮಾನದ ನೆನಪಾಗಿ ನಿರ್ಮಿಸಿದ ಮೇಡಂ ಟುಸ್ಸಾಡ್ಸ್‍ಗೆ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

ದೆಹಲಿಯ ಕೊನೌಟ್ ಪ್ರದೇಶದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯ ಬಾಲಿವುಡ್, ಹಾಲಿವುಡ್ ನಟರ, ಸಂಗೀತಗಾರರ, ರಾಜಕಾರಣಿಗಳ ಹಾಗೂ ಪ್ರಿಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಒಳಗೊಂಡಿದೆ.

Comments

Leave a Reply

Your email address will not be published. Required fields are marked *