ಕಬಾಬ್, ಚಿಕನ್ ಬಿರಿಯಾನಿ ಎಚ್‍ಡಿಕೆ ತಟ್ಟೆಯಲ್ಲಿ, ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಕೈ ತಟ್ಟೆಯಲ್ಲಿದೆ: ಜಗ್ಗೇಶ್

ಪಬ್ಲಿಕ್ ಟಿವಿ
ಮೈಸೂರು: ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ನೋಡಿದರೆ ಅಯ್ಯೋ ಪಾಪಾ ಅನಿಸುತ್ತದೆ. ಸರ್ಕಾರ ರಚನೆಗೆ ತನು, ಮನ, ಧನ ಎಲ್ಲ ಅರ್ಪಿಸಿ, ಈಗ ಒಳಿತು ಮಾಡು ಮನುಸ ಎಂಬ ಹಾಡಿನಂತೆ ಕೂತಿದ್ದಾರೆ ಅಂತ ನಟ, ಬಿಜೆಪಿ ಮುಖಂಡ ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಯವರು ನಮಗೆ ಒಳ್ಳೆಯ ಸ್ನೇಹಿತ. ಹಾಗಾಗಿ ಒಮ್ಮೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ನೋಡುವ ಆಸೆ ಇತ್ತು. ಆದರೆ ಅವರೀಗ ಎಲ್ಲವನ್ನೂ ದಾನ ಮಾಡಿದ ಮೇಲೆ ನಗುತ್ತಾ ಒಳಗಡೆ ಕೊರಗುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಬಂಡಾಯದ ಬಾವುಟ ಹಾರಿಸಿದ್ದಾರೆ ಅಂದ್ರು.

 

ಕಬಾಬ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಎಲ್ಲಾ ಸಿಎಂ ಎಚ್‍ಡಿಕೆ ತಟ್ಟೆಯಲ್ಲಿದೆ. ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಎಲ್ಲವೂ ಕಾಂಗ್ರೆಸ್ ತಟ್ಟೆಯಲ್ಲಿದೆ. ಇಬ್ಬರು ಊಟಕ್ಕೆ ಕೂತಿದ್ದಾರೆ. ಜೆಡಿಎಸ್‍ನವರು ಮೃಷ್ಠಾನ್ನ ಭೋಜನ ಮಾಡುವುದನ್ನ ನೋಡಿಕೊಂಡು ಕಾಂಗ್ರೆಸ್ಸಿನವರು ಸುಮ್ಮನಿರುವುದಕ್ಕೆ ಸಾಧ್ಯಾನಾ.? ನೋಡ್ತಾ ಇರಿ, ತಟ್ಟೆ ಮುಂದೆಯೇ ಇಬ್ಬರು ಬಡಿದಾಡಿಕೊಳ್ತಾರೆ. ಆ ಕಾಲ ತುಂಬಾ ದೂರ ಇಲ್ಲ. ಮದುವೆ ಮನೆಯಲ್ಲಿ ಊಟಕ್ಕೆ ಕಿತ್ತಾಡುವ ಸಂದರ್ಭ ಬಹಳ ಬೇಗ ಬರತ್ತೆ. ಈ ಆಟವನ್ನು ನೋಡಲು ನಾನೂ, ಜನರು ನೀವೂ ಎಲ್ಲರೂ ಕಾಯುತ್ತಿದ್ದೇವೆ ಅಂತ ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.

Comments

Leave a Reply

Your email address will not be published. Required fields are marked *