ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಇದೀಗ ಭಾರತ ತಂಡದ ಕ್ರಿಕೆಟ್ ಆಟಗಾರ ಕಿಚ್ಚ ಸುದೀಪ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.

ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಫಿಟ್ನೆಸ್ ಕುರಿತು ಅಭಿಯಾನವೊಂದು ಶುರು ಮಾಡಿದ್ದರು. ಈ ಅಭಿಯಾನದಲ್ಲಿ ಸ್ಟಾರ್ ನಟರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದರು. ಇದೀಗ ಕ್ರಿಕೆಟ್ ಆಟಗಾರ ವಿನಯ್ ಕುಮಾರ್ ಹಾಕಿದ್ದ ಫಿಟ್ನೆಸ್ ಚಾಲೆಂಜ್‍ನ್ನು ಸುದೀಪ್ ಸ್ವೀಕರಿಸಿದ್ದಾರೆ.

ವಿನಯ್ ಕುಮಾರ್ ತಮ್ಮ ಫಿಟ್ನೆಸ್ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ ನಂತರ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಕಿಚ್ಚ ಸುದೀಪ್, ಮನೀಶ್ ಪಾಂಡೆ, ಕರುಣ್ ಹಾಗೂ ಮಯಾಂಕ್ ಅವರಿಗೆ ಟ್ಯಾಗ್ ಮಾಡುವ ಮೂಲಕ ಫಿಟ್ನೆಸ್ ಚಾಲೆಂಜ್ ನೀಡಿದ್ದರು.

ವಿನಯ್ ಕುಮಾರ್ ಚಾಲೆಂಜ್ ಕಿಚ್ಚ ಸುದೀಪ್ ಸ್ವೀಕರಿಸಿ ತಮ್ಮ ಫಿಟ್ನೆಸ್ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕಿಚ್ಚ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ ಅದಕ್ಕೆ, “ಸಹೋದರ ನಿನ್ನ ಚಾಲೆಂಜ್ ನಾನು ಸ್ವೀಕರಿಸುತ್ತಿದ್ದೇನೆ. ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಚಾಲೆಂಜ್ ಪೂರ್ಣಗೊಳಿಸಿ ಬಾಲಿವುಡ್ ನಟ ರಿತೇಶ್ ದೇಶ್‍ಮುಕ್, ನಟ ಹಾಗೂ ನಿರ್ಮಾಪಕ ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿ ಕ್ರಿಕೆಟಿಗ ವಿನಯ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ “ಅದ್ಭುತ ಸಹೋದರ. ನನ್ನ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಸುದೀಪ್ ಅವರ ಫಿಟ್ನೆಸ್ ವಿಡಿಯೋ ನೋಡಿದ ಜಿ.ಕೆ ಅನಿಲ್ ಕುಮಾರ್ ಟ್ವಿಟ್ಟರಿನಲ್ಲಿ, “ವ್ಹಾ..ವ್ಹಾ..” ಎಂದು ಟ್ವೀಟ್ ಮಾಡಿದ್ದರು. ಆಗ ಕಿಚ್ಚ ನೀವು ಕೂಡ ಈ ಚಾಲೆಂಜ್ ಸ್ವೀಕರಿಸಿ ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *