2012ರ ನಂತ್ರ ಏರಿಕೆ: ಅಂಪೈರ್, ಸ್ಕೋರರ್, ಕೂರೇಟರ್ ಸಂಬಳ ಎಷ್ಟಿತ್ತು? ಎಷ್ಟು ಏರಿಕೆಯಾಗಲಿದೆ?

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಂಪೈರ್, ಕ್ಯೂರೇಟರ್ ಹಾಗೂ ಕ್ರಿಕೆಟ್ ವಿಶ್ಲೇಷಕರ ಸಂಭಾವನೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಸದ್ಯ ಬಿಸಿಸಿಐ ಕಾರ್ಯದರ್ಶಿ ಆಗಿರುವ ಸಬಾ ಕರೀಂ ಅವರು ಏಪ್ರಿಲ್ 12 ರ ಸಭೆಯಲ್ಲಿ ನೀಡಿದ ಸಲಹೆ ಮೇರೆಗೆ ಈ ಕುರಿತು ಚಿಂತನೆ ನಡೆಸಿದೆ. ಅಲ್ಲದೇ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಭಾವನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

100% ಹೆಚ್ಚಳ: ಸದ್ಯ 2012 ರಿಂದಲೂ ಬಿಸಿಸಿಐ ನಲ್ಲಿ ಕಾರ್ಯನಿರ್ವಹಿಸುತ್ತಿರುವ 105 ಅಂಪೈರ್ ಗಳು ಸಂಭಾವನೆ 100% ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 2002 ರಲ್ಲಿ ಅಂಪೈರ್ ಗಳ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಬಿಸಿಸಿಐ ಸಂಭಾವನೆ ಹೆಚ್ಚಳದ ಚಿಂತನೆ ನಡೆಸಿದೆ. ಸದ್ಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಟಾಪ್ 20 ಅಂಪೈರ್ ಗಳು ಮೂರುದಿನ ಅಥವಾ 50 ಓವರ್ ಗಳ ಪಂದ್ಯಕ್ಕೆ ಒಂದು ದಿನಕ್ಕೆ 20 ಸಾವಿರ ರೂ. ದಿನ ಪಡೆಯುತ್ತಿದ್ದಾರೆ. ಸದ್ಯ ಬಿಸಿಸಿಐ ನಿರ್ಧಾರದ ಬಳಿಕ ಅವರು 40 ಸಾವಿರ ರೂ. ಪಡೆಯಲಿದ್ದಾರೆ. ಉಳಿದ 85 ಅಂಪೈರ್ ಗಳು ದಿನ ಒಂದಕ್ಕೆ 30 ಸಾವಿರ ರೂ. ಪಡೆಯುತ್ತಾರೆ.

ಟಿ20 ಮಾದರಿಯನ್ನು ಗಮನಿಸಿದರೆ ಟಾಪ್ 20 ಅಂಪೈರ್ ಗಳು 20 ಸಾವಿರ ರೂ. ಹಾಗೂ ಉಳಿದ 85 ಅಂಪೈರ್ ಗಳು 15 ಸಾವಿರ ರೂ. ಪಡೆಯಲಿದ್ದಾರೆ. ವಿದೇಶಿ ಅಂಪೈರ್ ಗಳ ದಿನ ಭತ್ಯೆ 750 ರೂ. ನಿಂದ 1,500 ರೂ.ಗೆ ಏರಿಕೆಯಾಗಿದೆ. ಇತರೇ ಅಂಪೈರ್ ಗಳ ದಿನ ಭತ್ಯೆ 500 ರೂ. ನಿಂದ 1 ಸಾವಿರ ರೂ.ಗೆ ಏರಿಕೆಯಾಗಿದೆ.

ಪಿಚ್ ಕ್ಯೂರೇಟರ್ ಗಳ ಸಂಭಾವನೆಯೂ 2012ರ ಬಳಿಕ ಮೊದಲ ಬಾರಿಗೆ ಹೆಚ್ಚಳವಾಗುತ್ತಿದೆ. ಪ್ರಮುಖ ಐದು ವಲಯ ಮತ್ತು ಸಹಾಯಕ ಕ್ಯೂರೇಟರ್ ಗಳು ಈ ಹಿಂದೆ ವಾರ್ಷಿಕವಾಗಿ 6 ಲಕ್ಷ ರೂ. ಮತ್ತು 4.2 ಲಕ್ಷ ರೂ.ಗಳನ್ನು ಪಡೆಯುತ್ತಿದ್ದರು. ಈಗ ಈ ಮೊತ್ತ 12 ಲಕ್ಷ ರೂ. ಮತ್ತು 8.4 ಲಕ್ಷ ರೂ.ಗೆ ಏರಿಕೆಯಾಗಿದೆ.

ಪಂದ್ಯದ ಸ್ಕೋರ್ ಮಾಹಿತಿಯನ್ನು ದಾಖಲಿಸುವ ಸಿಬ್ಬಂದಿಯೂ ಸಹ ಸಂಭಾವನೆಯ ಹೆಚ್ಚಳ ಪಡೆಯಲಿದ್ದಾರೆ. ಸದ್ಯ ಬಿಸಿಸಿಐಯಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಮಂದಿ ಈ ಲಾಭ ಪಡೆಯಲಿದ್ದಾರೆ. ಸದ್ಯ ಪ್ರಥಮ ದರ್ಜೆ ಮೂರು ದಿನ ಅಥವಾ 50 ಓವರ್ ಪಂದ್ಯಕ್ಕೆ 10 ಸಾವಿರ ರೂ. ಸಂಭಾವನೆ ಹಾಗೂ ಸಿಮೀತ ಓವರ್ ಪಂದ್ಯಕ್ಕೆ 5 ಸಾವಿರ ರೂ. ಗಳು ಸಂಭಾವನೆ ಪಡೆಯಲಿದ್ದಾರೆ. ಅಲ್ಲದೇ ಪ್ರತಿ ದಿನದ ಭತ್ಯೆ ಹೆಚ್ಚಳವಾಗಿದ್ದು, ಔಟ್ ಸ್ಟೇಷನ್ ಸ್ಕೋರರ್ ಗಳಿಗೆ 1,500 ರೂ. ಹಾಗೂ ಉಳಿದವರಿಗೆ 1 ಸಾವಿರ ರೂ. ಸಿಗಲಿದೆ.

ಸದ್ಯ ಬಿಸಿಸಿಐ ಚಿಂತನೆಗೆ ಸುಪ್ರೀಂ ನಿಂದ ನಿಯೋಜನೆ ಮಾಡಲಾಗಿರುವ ಬಿಸಿಸಿಐ ಆಡಳಿತಾತ್ಮಕ ಸಂಸ್ಥೆ(ಸಿಒಎ) ಸಹ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಇದರೊಂದಿಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಭಾವನೆ ಸಹ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಬಿಸಿಸಿಐ ಅಧ್ಯಕ್ಷರು ಸದ್ಯ ವಾರ್ಷಿಕ 80 ಲಕ್ಷ ರೂ. ಹಾಗೂ ಸಮಿತಿಯ ಸದಸ್ಯರು 60 ಲಕ್ಷ ರೂ. ಪಡೆಯುತ್ತಿದ್ದಾರೆ. ಬಿಸಿಸಿಐ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರೆ ಕ್ರಮವಾಗಿ 1 ಕೋಟಿ ರೂ. ಹಾಗೂ 75 ರಿಂದ 80 ಲಕ್ಷ ರೂ. ಗೆ ಸಂಭಾವನೆ ಹೆಚ್ಚಳವಾಗುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *