ಕುಮಾರಸ್ವಾಮಿಯೇ 5 ವರ್ಷ ಸಿಎಂ – ಲೋಕಸಭಾ ಚುನಾವಣೆಯಲ್ಲೂ ಮೈತ್ರಿಗೆ ರೆಡಿ!

ಬೆಂಗಳೂರು: ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ವಾರದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರ ಹಂಚಿಕೆಗೆ ಅಂತಿಮ ಸೂತ್ರ ಕಂಡುಕೊಂಡಿವೆ. 5 ವರ್ಷ ಅಂದ್ರೆ ಪೂರ್ಣಾವಧಿಗೆ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.

ಈ ಮೂಲಕ ಎರಡೂವರೆ ವರ್ಷಕ್ಕೆ ಸಿಎಂ ಬದಲಾಗ್ತಾರೆ ಅನ್ನೋ ಅರ್ಥದಲ್ಲೇ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಗೆ ಈಗ ಅರ್ಥ ಕಳೆದುಕೊಂಡಿದೆ. ಖಾತೆಗಳ ವಿಷ್ಯದಲ್ಲಿ ಹಣಕಾಸು ಜೆಡಿಎಸ್ ಪಾಲಾದ್ರೆ, ಗೃಹ ಖಾತೆ ಕಾಂಗ್ರೆಸ್ ಪಾಲಾಗಿದೆ.

ಎರಡೂ ಪಕ್ಷಗಳು, ಸರ್ಕಾರದ ನಡುವೆ ಸಮನ್ವಯಕ್ಕಾಗಿ ಸಮನ್ವಯ ಸಮಿತಿ ರಚನೆ ಮತ್ತು ಎರಡೂ ಪಕ್ಷಗಳ ಪ್ರಣಾಳಿಕೆ ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಘೋಷಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ದೀರ್ಘಕಾಲದವರೆಗೆ ಮೈತ್ರಿ ಉಳಿಸಿಕೊಳ್ಳುವ ಸಲುವಾಗಿ ಮುಂದಿನ ವರ್ಷ ನಡೆಯೋ ಲೋಕಸಭಾ ಚುನಾವಣೆಯಲ್ಲೂ ಕೈ-ತೆನೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿವೆ.

ಅಂದಹಾಗೆ ಈ ಎಲ್ಲ ಅಂಶಗಳನ್ನೊಳಗೊಂಡ ಲಿಖಿತ ಒಪ್ಪಂದ ಸಹಿ ಹಾಕಲು ಎರಡೂ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಮೈತ್ರಿ ಸೂತ್ರ ಸಂಬಂಧ ದೆಹಲಿಯಲ್ಲೇ ಎರಡೂ ಪಕ್ಷಗಳ ನಡುವೆ ಐದು ಸುತ್ತಿನ ಮಾತುಕತೆ ನಡೆದಿತ್ತು. ಗುರುವಾರ ಬೆಂಗಳೂರಿಗೆ ದೌಡಾಯಿಸಿದ್ದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಜೆಡಿಎಸ್‍ನ ಡ್ಯಾನಿಶ್ ಅಲಿ ಪಕ್ಷಗಳ ಪ್ರಾದೇಶಿಕ ನಾಯಕರೊಂದಿಗೆ ಸಭೆ ನಡೆಸಿದ್ದರು. ಇತ್ತ ತಾಯಿ ಸೋನಿಯಾ ಗಾಂಧಿ ಚಿಕಿತ್ಸೆ ಸಲುವಾಗಿ ಅಮೆರಿಕಕ್ಕೆ ಹೋಗಿರೋ ರಾಹುಲ್ ಗಾಂಧಿ ಬುಧವಾರವಷ್ಟೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *