ಹೆಲ್ಮೆಟ್ ಹಾಕಿ ಚಿನ್ನದ ಅಂಗಡಿಗೆ ನುಗ್ಗಿದ ಖದೀಮರು – ಜೀವ ಪಣಕ್ಕಿಟ್ಟು ತಂದೆಯನ್ನು ರಕ್ಷಿಸಿದ ಮಗಳು!

ಬೆಂಗಳೂರು: ಹೆಣ್ಣು ಸಂಸಾರದ ಕಣ್ಣು, ಮನೆ ಬೆಳಗೋ ದೀಪ ಅಂತಾರೆ. ಈ ಮಾತಿಗೆ ತಕ್ಕಹಾಗೆನೇ ಮಗಳು ಧೈರ್ಯದಿಂದ ಹೋರಾಡಿ ತಂದೆಯ ಪ್ರಾಣ ಉಳಿಸಿದ್ದಾಳೆ.

ನಗರದ ಅಶೋಕ ಪಿಲ್ಲರ್ ಬಳಿ ರಘು ಅನ್ನೋರ ಆಭರಣದಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಚಿನ್ನದ ಅಂಗಡಿಗೆ ಹೆಲ್ಮೆಟ್ ಹಾಕ್ಕೊಂಡು ನುಗ್ಗಿದ ಖದೀಮರು ಮಾರಕಾಸ್ತ್ರ ತೋರಿಸಿ ದರೋಡೆಗೆ ಯತ್ನಿಸಿದ್ದಾರೆ. ದರೋಡೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವೇಳೆ ಅಂಗಡಿಯಲ್ಲೇ ಇದ್ದ ರಘುರ ಹೆಣ್ಮಕ್ಕಳು ಖದೀಮರನ್ನು ಹೊರದಬ್ಬಿದ್ದಾರೆ.

ಗುರುವಾರ ಸಂಜೆ ನಮ್ಮ ಅಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದೆ. ಈ ವೇಳೆ ಚಿನ್ನಾಭರಣ ಖರೀದಿ ನೆಪವೊಡ್ಡಿ ವ್ಯಕ್ತಿಯೊಬ್ಬ ಅಂಗಡಿಗೆ ಬಂದಿದ್ದನು. ಮಾಮೂಲಿ ವ್ಯಾಪಾರಿಗಳಿಗೆ ತೋರಿಸೊ ಥರನೇ ನಾನು ಕೂಡಾ ಆತನಿಗೆ ಚಿನ್ನಾಭರಣ ತೋರಿಸಿದೆ. ಆಗಲೇ ಆತನ ಅಸಲಿ ಮುಖ ಬಯಲಾಗಿದ್ದು, ಖರೀದಿ ನೆಪವೊಡ್ಡಿ ಅಂಗಡಿಗೆ ಬಂದ ಖದೀಮ ನಂತರ ಚಾಕು ತೆಗೆದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಅವನು ಚಾಕು ತೋರಿಸಿ ಬೆದರಿಸೋವಾಗ ಅವನ ಹಿಂದಿನಿಂದ ಅವನ ಟೀಂ ಕೂಡಾ ಹೆಲ್ಮೆಟ್ ಹಾಕಿಕೊಂಡು ಬಂದಿದೆ. ಈ ಖದೀಮರನ್ನು ನೋಡಿದ ನಾನು ಹೆದರಿಕೊಂಡು ಕಳ್ಳ ಕಳ್ಳ ಎಂದು ಚೀರಾಡಿದೆ. ನನ್ನ ಕಿರುಚಾಟ ಕೇಳಿ ಮಗಳು ಓಡಿ ಬಂದಿದ್ದಾಳೆ. ಅಲ್ಲದೇ ತನ್ನ ಪ್ರಾಣವನ್ನೂ ಲೆಕ್ಕಿಸದೆ ಧೈರ್ಯದಿಂದ ಕಳ್ಳರ ಜೊತೆ ಹೋರಾಡಿ, ಅಂಗಡಿಯಿಂದ ಕಳ್ಳರನ್ನು ಹೊರಗಟ್ಟಿ ನನ್ನ ಪ್ರಾಣವನ್ನು ರಕ್ಷಿಸಿದ್ದಾಳೆ ಎಂದು ಅಂಗಡಿ ಮಾಲೀಕ ರಘು ಹೇಳಿದ್ದಾರೆ.

ಇತ್ತ ಕಳ್ಳರು ಏನೂ ದೋಚದೆ ವಾಪಾಸ್ಸಾಗಿದ್ದಾರೆ. ಸದ್ಯ ಈ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *