ಪಾರ್ವತಮ್ಮ ರಾಜ್ ಕುಮಾರ್ 1ನೇ ವರ್ಷದ ಪುಣ್ಯ ತಿಥಿ: ಸಮಾಧಿಗೆ ಕುಟುಂಬದಿಂದ ಪೂಜೆ

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಶ್ರೀಮತಿ, ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದಿಗೆ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ.

ಒಂದನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ದೊಡ್ಮನೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪಾರ್ವತಮ್ಮನವರ ಸಮಾಧಿಗೆ ಪೂಜೆ ಸಲ್ಲಿಸಿದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬ ಪೂಜೆಯಲ್ಲಿ ಭಾಗಿಯಾಗಿತ್ತು.

ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಪಾರ್ವತಮ್ಮ ಹಾಗೂ ಡಾ. ರಾಜ್‍ಕುಮಾರ್ ಸ್ಮಾರಕಕ್ಕೆ ಅಲಂಕಾರ ಮಾಡಲಾಗಿದೆ. ಇಂದು ಪುಣ್ಯತಿಥಿಯ ಪ್ರಯುಕ್ತ ರಕ್ತದಾನ, ಆರೋಗ್ಯ ತಪಾಸಣೆ, ಅನ್ನದಾನವನ್ನು ಆಯೋಜಿಸಲಾಗಿದ್ದು, ದೊಡ್ಮನೆಯಲ್ಲಿ ವರ್ಷದ ತಿಥಿ ಕಾರ್ಯಕ್ರಮಗಳು ನಡೆಯಿತು.

ಅಮ್ಮನ ನೆನಪಿನಲ್ಲಿ ಶಿವಣ್ಣ ಹಾಗೂ ಪುನೀತ್ ರಾಜ್ ಕುಮಾರ್ ಇಂದು ಸಿರಿಗೇರಿ ಯರಿಸ್ವಾಮಿ ಬರೆದ ‘ದೊಡ್ಮನೆ ಅಮ್ಮ’ ಪುಸ್ತಕವನ್ನು ಬಿಡುಗಡೆ ಮಾಡಿದರು.

ಇನ್ನೂ ಸಮಾಧಿಗೆ ರಾಜ್ ಕುಟುಂಬದವರು ಸೇರಿದಂತೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಹಿರಿಯ ನಟಿ ಶಾಂತಮ್ಮ, ಅನೇಕರು ಭಾಗಿಯಾಗಿದ್ದರು. ಇದೇ ವೇಳೆ ಪಾರ್ವತಮ್ಮನವರನ್ನು ನೆನೆದ ರಾಕ್ ಲೈನ್ ವೆಂಕಟೇಶ್, ನನ್ನ ಅಮ್ಮನನ್ನು ಕಳೆದುಕೊಂಡ ನಂತರ ಅಮ್ಮನ ಸ್ಥಾನ ನೀಡಿದ್ದು, ಪಾರ್ವತಮ್ಮ ಮತ್ತು ತಂದೆ ಸ್ಥಾನದಲ್ಲಿ ಡಾ.ರಾಜ್ ಕುಮಾರ್ ನಿಂತಿದ್ದರು. ಇಂದು ನಾನು ಏನು ಆಗಿದ್ದೇನೊ ಅದಕ್ಕೆ ಇವರಿಬ್ಬರು ಕಾರಣ ಎಂದು ಹೇಳಿದರು. ಪಾರ್ವತಮ್ಮನವರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ಸೀರೆ ತಂದು ಕೊಡುತ್ತಿದ್ದ ಬಗ್ಗೆ ಪ್ರಶ್ನೆ ಕೇಳಿದಕ್ಕೆ ರಾಕ್ ಲೈನ್ ವೆಂಕಟೇಶ್ ಭಾವುಕರಾದರು.

Comments

Leave a Reply

Your email address will not be published. Required fields are marked *