ಲೋಕಸಭಾ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು – ಮಹಾಮೈತ್ರಿ ಕೂಟದ ಅಳಿವು-ಉಳಿವಿನ ಸುಳಿವು

ಬೆಂಗಳೂರು: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಲಾಗಿರುವ, ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಡೆದಿರೋ ಉಪ ಚುನಾವಣೆಯ ಫಲಿತಾಂಶ ಕೂಡಾ ಇವತ್ತೇ ಹೊರಬೀಳಲಿದೆ. ಇದು ಮಹಾಮೈತ್ರಿಕೂಟದ ಸಾಧ್ಯಸಾಧ್ಯತೆಗಳ ಶಕುನ ನುಡಿಯಲಿದೆ.

ಉತ್ತರ ಪ್ರದೇಶದ ಕೈರನಾ, ಮಹಾರಾಷ್ಟ್ರದ ಪಾಲ್ಘಾರ್, ಭಂಡಾರಾ-ಗೊಂಡಿಯಾ ಮತ್ತು ನಾಗಾಲ್ಯಾಂಡ್ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಮೇ 28ರಂದು ಚುನಾವಣೆ ನಡೆದಿತ್ತು. ಇಂದು ಎಲ್ಲ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಹೊರ ಬರಲಿದೆ.

ಕೈರನಾ: ಉತ್ತರಪ್ರದೇಶದ ಕೈರಾನಾ ಸಂಸದೀಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮ್ರಿಗಾಂಕಾ ಸಿಂಗ್ ಮತ್ತು ರಾಷ್ಟ್ರೀಯ ಲೋಕದಳದಿಂದ ತಬ್ಸಂ ಸಿಂಗ್ ನಡುವೆ ನೇರ ಸ್ಪರ್ಧೆ ಇದೆ. ಆರ್‍ಎಲ್‍ಡಿ ಅಭ್ಯರ್ಥಿಗೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಹುಜನಸಮಾಜವಾದಿ ಪಾರ್ಟಿ ಬೆಂಬಲ ನೀಡಿವೆ. ಕ್ಷೇತ್ರದಲ್ಲಿ 16 ಲಕ್ಷ ಮತದಾರರಿದ್ದು ಇವರಲ್ಲಿ ಐದೂವರೆ ಲಕ್ಷ ಮುಸ್ಲಿಂ, ಎರಡೂವರೆ ಲಕ್ಷ ದಲಿತ ಮತ್ತು 2 ಲಕ್ಷ ಜಾಟ್ ಸಮುದಾಯದ ಮತಗಳಿವೆ. 2014ರಲ್ಲಿ ಕ್ಷೇತ್ರದಲ್ಲಿ ಬಿಜೆಪಿಯಿಂದ ದಿವಂಗತ ಹುಕುಂಸಿಂಗ್ ಆಯ್ಕೆ ಆಗಿದ್ದರು.

 

ಪಾಲ್ಘಾರ್: ಮಹಾರಾಷ್ಟ್ರದ ಪಾಲ್ಘಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗವಿತೆ ಮತ್ತು ಮಿತ್ರಪಕ್ಷ ಶಿವಸೇನೆ ಶ್ರೀನಿವಾಸ್ ವನಗಾ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್‍ನಿಂದ ದಾಮೋದರ್ ಸಿಂಗ್ದಾಗೆ ಎನ್‍ಸಿಪಿ ಬೆಂಬಲವೂ ಇದೆ. 2019ರಲ್ಲಿ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಾಗಿ ಶಿವಸೇನೆ ಈಗಾಗ್ಲೇ ಘೋಷಿಸಿದ್ದು, ಆ ನಿರ್ಧಾರದ ಉಪ ಚುನಾವಣಾ ಫಲಿತಾಂಶ ಪರಿಣಾಮ ಬೀರಲಿದೆ.

ಭಂಡಾರಾ-ಗೊಂಡಿಯಾ: ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಹೇಮಂತ್ ಪಟೇಲ್ ಮತ್ತು ಎನ್‍ಸಿಪಿಯ ಮಧುಕರ್ ಕುಡ್ಕೆ ನಡುವೆ ಸ್ಪರ್ಧೆ ಇದೆ. ಎನ್‍ಸಿಪಿಗೆ ಕಾಂಗ್ರೆಸ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿಸಿದೆ. 2014ರಲ್ಲಿ ಪ್ರಫುಲ್ ಪಟೇಲ್ ವಿರುದ್ಧ ಗೆದ್ದಿದ್ದ ನಾನಾ ಪಟೋಲೆ ಪ್ರಧಾನಿ ಮೋದಿ ವಿರುದ್ಧ ಸಿಟ್ಟೆದ್ದು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದರು.

ನಾಗಲ್ಯಾಂಡ್: ನಾಗಲ್ಯಾಂಡ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಎನ್‍ಡಿಪಿಪಿವುಳ್ಳ ಪಿಡಿಎ ಮೈತ್ರಿಕೂಟದ ಅಭ್ಯರ್ಥಿ ಟೊಖೆಹೋ ಯೆಪ್ತೋಮಿ ಮತ್ತು ನಾಗಾ ಪೀಪಲ್ಸ್ ಫ್ರಂಟ್‍ನ ಅಶೋಕ್ ಜಮೀರ್ ನಡುವೆ ನೇರ ಹಣಾಹಣಿ ಇದೆ. ಎನ್‍ಪಿಎಫ್‍ಗೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ನಾಗಾಲ್ಯಾಂಡ್ ಸಿಎಂ ಮತ್ತು ಎನ್‍ಡಿಪಿಪಿ ನಾಯಕ ನೆಪಿಹ್ಯೂ ರಿಯೋ ರಾಜೀನಾಮೆಯಿಂದಾಗಿ ಉಪ ಚುನಾವಣೆ ಅನಿವಾರ್ಯವಾಯ್ತು.

Comments

Leave a Reply

Your email address will not be published. Required fields are marked *