ಕರ್ನಾಟಕದಲ್ಲಿರೋ ರಾಜ್ಯ ಸರ್ಕಾರ ಸತ್ತುಹೋಗಿದೆ: ಶೋಭಾ ಕರಂದ್ಲಾಜೆ

ಉಡುಪಿ: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸತ್ತುಹೋಗಿದೆ. ಒಬ್ಬ ಮುಖ್ಯಮಂತ್ರಿಯೇ ಎಲ್ಲಾ ಖಾತೆ ನಿಭಾಯಿಸಲು ಮುಂದಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಮಳೆ ಹಾನಿಗೆ ಒಳಗಾದ ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಿ, ಸಿಡಿಲು ಬಡಿದು ಸಾವನ್ನಪ್ಪಿದ ಗ್ರಾಮ ಪಂಚಾಯ್ತಿ ಸದಸ್ಯೆ ಶೀಲಾ ಕುಟುಂಬದ ಸದಸ್ಯರಿಗೆ ಕರಂದ್ಲಾಜೆ ಸಾಂತ್ವನ ಹೇಳಿದರು. ಪಡುಬಿದ್ರೆಯಲ್ಲಿ ನೀರು ಪಾಲಾದ ಬಾಲಕಿ ನಿಧಿ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

ಸರ್ಕಾರ ಇಲ್ಲದಿರುವುದಕ್ಕೆ ಅಧಿಕಾರಿಗಳು ನಿಧಾನವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ತಕ್ಷಣ ಇಲ್ಲಿಗೆ ಭೇಟಿ ನೀಡಿ ಮನೆ-ತೋಟಗಳಿಗೆ ಅಪಾರ ಹಾನಿಯನ್ನು ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ಹದಿನೈದು ದಿನಗಳ ಕಾಲ ಕಾಂಗ್ರೆಸ್-ಜೆಡಿಎಸ್ ಶಾಸಕರು ರೆಸಾರ್ಟ್ ನಲ್ಲಿದ್ದರು. ಈಗ ದೆಹಲಿಯಲ್ಲಿ ಬೀಡು ಬಿಟ್ಟಿದಾರೆ, ಅವರು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ. ಖಾತೆ ಹಂಚಿಕೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಜಗಳಕ್ಕೆ ಮುಂದಾಗಿವೆ, ಇವರಿಗೆ ರಾಜ್ಯದ ಜನತೆ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.

ಸಂಸದ ನಳಿನ್ ಕುಮಾರ್ ಕಾಟಿಲು ಹಾಗೂ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅವರು ಮಂಗಳೂರು ನಗರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಹಾಯ ಹಸ್ತ ನೀಡಿದರು.

ನಗರದಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದೆ. ಹೀಗಾಗಿ ಮಳೆ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ. ಇದಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷವೇ ಕಾರಣ. ಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಸಂಸದ ನಳೀನ್ ಕುಮಾರ್ ಕಟಿಲು ಹೇಳಿದರು.

ಸಂತ್ರಸ್ತರ ಅನುಕೂಲಕ್ಕಾಗಿ ಬಿಜೆಪಿ ವತಿಯಿಂದ ಎರಡು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಂಗಳೂರಿನ ಬಿಜೈ ಬಳಿ ಆನೆಗುಂಡಿಯಲ್ಲಿ 30 ಮನೆಗಳಿಗೆ ನುಗ್ಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಸಂತ್ರಸ್ತರಿಗೆ ಪರಿಹಾರ ಘೋಷಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *