ಭೂ ತಾಯಿಯ ಮಡಿಲಿನಲ್ಲಿ ಚಿರ ನಿದ್ರೆಗೆ ಜಾರಿದ ಶಾಸಕ ಸಿದ್ದು ನ್ಯಾಮಗೌಡ

ಬಾಗಲಕೋಟೆ: ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅಂತ್ಯಕ್ರಿಯೆಯನ್ನು ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ಜಮಖಂಡಿ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.

ಮುಂದಿನ ದಿನಗಳಲ್ಲಿ ಸಿದ್ದು ನ್ಯಾಮಗೌಡರ ಪುತ್ಥಳಿ ನಿರ್ಮಿಸುವ ಉದ್ದೇಶದಿಂದ ಕಾರ್ಖಾನೆ ಮುಖ್ಯ ದ್ವಾರದ ಎದುರು ಸಮಾಧಿ ಮಾಡಲಾಗಿದೆ. ಗದಗಿನ ತೊಂಟದಾರ್ಯ ಶ್ರೀಗಳು, ಮುತ್ತಿನಕಂತಿಮಠದ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಧಾರ್ಮಿಕ ಕ್ರಿಯಾವಿಧಿಗಳು ನೆರವೇರಿಸಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂಜಿ ಪರಮೇಶ್ವರ ಸೇರಿದಂತೆ ರಾಜ್ಯ ನಾಯಕರು ಅಂತ್ಯ ಕ್ರಿಯೆಯಲ್ಲಿ ಭಾಗಿಯಾದ್ರು.

ಒಬ್ಬ ಪ್ರಾಮಾಣಿಕ ಸ್ನೇಹಿತ, ಒಡನಾಟಿಯನ್ನ ಕಳೆದುಕೊಂಡಿದ್ದೇನೆ. ದೆಹಲಿಯಲ್ಲಿ ನನ್ನನ್ನ ಭೇಟಿಯಾಗಿ ಮಂತ್ರಿ ಸ್ಥಾನದ ಬಗ್ಗೆ ವಿಚಾರ ಹಂಚಿಕೊಂಡಿದ್ರು. ಮಂತ್ರಿ ಸ್ಥಾನ ನೀಡುವ ಭರವಸೆಯನ್ನ ನೀಡಲಾಗಿತ್ತು. ದೆಹಲಿಯಿಂದ ಬೆಂಗಳೂರಿಗೆ ಬರುವ ಬದಲು, ಗೋವಾಗೆ ಹೋಗಿದ್ದು ವಿಧಿ ಲಿಖಿತ. ಸರಳ ಸಜ್ಜನಿಕೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದು ನನಗೆ ಭಾರೀ ನೋವು ಉಂಟುಮಾಡಿದೆ. ರೈತಪರ ಕಾಳಜಿ ಹೊಂದಿದ್ದ ವ್ಯಕ್ತಿ ನ್ಯಾಮಗೌಡ. ಶಾಸಕರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸೋನಿಯಾ, ರಾಹುಲ್ ಗಾಂಧಿ ಸಂತಾಪವನ್ನು ನನ್ನ ಎದುರು ವ್ಯಕ್ತಪಡಿಸಿದ್ರು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ರು.

ಸೋಮವಾರ ಬೆಳಗಿನ ಜಾವ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಬಳಿ ಶಾಸಕರ ಕಾರು ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ಮುಂಭಾಗದಲ್ಲಿ ಕುಳಿತಿದ್ದ ಶಾಸಕರು ಗಂಭೀರವಾಗಿ ಗಾಯಗೊಂಡಿದ್ರು. ಕೂಡಲೇ ಶಾಸಕರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶಾಸಕರು ಸಾವನ್ನಪ್ಪಿದ್ರು.

Comments

Leave a Reply

Your email address will not be published. Required fields are marked *