ಮಡಿಕೇರಿ: ರಾಜ್ಯದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕೊಡಗಿನ ತಲಕಾವೇರಿ ಹಾಗು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಡ್ರೆಸ್ ಕೋಡ್ ಜಾರಿಗೆ ಆಗಿದೆ. ಪುಣ್ಯ ಕ್ಷೇತ್ರಗಳಿಗೆ ತುಂಡುಡುಗೆ ತೊಟ್ಟು ಬರುವವರಿಗೆ ನಿರ್ಬಂಧ ಹೇರಲು ದೇವಾಲಯ ವ್ಯವಸ್ಥಾಪನಾ ಸಮಿತಿ ಮುಂದಾಗಿದೆ.
ಪ್ರಕೃತಿ ಸೌಂದರ್ಯದಿಂದಾಗಿ ರಾಜ್ಯವಲ್ಲದೆ ದೇಶದ ಜನರನ್ನ ತನ್ನತ್ತ ಸೆಳೆದಿದ್ದ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಿಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ದೇಶ ವಿದೇಶಗಳ ಪ್ರವಾಸಿಗರು ಅತ್ಯಾಧುನಿಕ ಬಟ್ಟೆಗಳನ್ನು ಧರಿಸಿ ಇಲ್ಲಿಗೆ ಬರುತ್ತಿದ್ದರು. ತುಂಡುಡುಗೆ ತೊಟ್ಟು ಕ್ಷೇತ್ರಕ್ಕೆ ಬರುವುದರಿಂದ ಕ್ಷೇತ್ರದ ಪಾವಿತ್ರತೆಗೆ ಧಕ್ಕೆಯಾಗುತ್ತಿದೆ ಎಂದು ತೀರ್ಮಾನಿಸಿದ ದೇವಾಲಯ ವ್ಯವಸ್ಥಾಪನಾ ಸಮಿತಿ ಇದೀಗ ಡ್ರೆಸ್ ಕೋಡ್ ಮಾಡಿದೆ.

ಈ ಬಗ್ಗೆ ತೀರ್ಮಾನ ಕೈಗೊಂಡಿರುವ ಭಗಂಡೇಶ್ವರ ಹಾಗು ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಹೀಗೆ ತುಂಡುಡುಗೆ ತೊಟ್ಟುಬರುವವರಿಗಾಗಿಯೇ ದೇವರ ದರ್ಶನದ ವೇಳೆ ವಿಶೇಷ ಬಟ್ಟೆಗಳನ್ನು ಬಾಡಿಗೆಗೆ ನೀಡಲು ಮುಂದಾಗಿದೆ. ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವವರು ಸಾಂಪ್ರದಾಯಿಕ ಉಡುಗೆ ತೊಟ್ಟು ಬರುವಂತೆ ಭಕ್ತರಲ್ಲಿ ಮನವಿ ಮಾಡಿದೆ.
ತಲಕಾವೇರಿ ಹಾಗು ಬಾಗಮಂಡಲ ಪ್ರವಾಸಿತಾಣಗಳಲ್ಲ. ಬದಲಾಗಿ ರಾಜ್ಯದ ಪ್ರಸಿದ್ಧ ಪುಣ್ಯ ಧಾರ್ಮಿಕ ಕ್ಷೇತ್ರಗಳು ಮೋಜು ಮಸ್ತಿ ಮಾಡುವವರಿಗೆ ಇಲ್ಲಿ ಅವಕಾಶವಿಲ್ಲ ಎಂದಿರುವ ಸಮಿತಿ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಭಕ್ತರಲ್ಲಿ ಮನವಿ ಮಾಡಿದೆ ಎಂದು ದೇವಾಲಯದ ಮುಖ್ಯಸ್ಥ ಮೋಟಯ್ಯ ಹೇಳಿದ್ದಾರೆ.

ದಿನದಿಂದ ದಿನಕ್ಕೆ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದಿನಕಳೆದಂತೆ ಫ್ಯಾಷನ್ ಹೆಸರಿನ ವಸ್ತ್ರ ಮಾಲೀನ್ಯ ಮಿತಿಮೀರುತ್ತಿದೆ. ಟೂರಿಸ್ಟ್ ಸ್ಥಳಗಳಾದರೆ ಉಡುಪು ಹೇಗಿದ್ದರೂ ನಡೆಯುತ್ತೆ. ಆದರೆ ತಲಕಾವೇರಿ ಹಾಗು ಭಾಗಮಂಡಲ ಪುಣ್ಯ ಕ್ಷೇತ್ರಗಳು ಇಲ್ಲಿಗೆ ಬರುವವರ ಉಡುಪು ಸಾಂಪ್ರದಾಯಿಕವಾಗಿರಬೇಕು. ಕೊಡಗಿನ ಜನರ ಮನೆದೇವತೆ ಕಾವೇರಿ ತಾಯಿಯ ಕ್ಷೇತ್ರಕ್ಕೆ ತನ್ನದೆಯಾದ ಸ್ಥಳ ಮಹಿಮೆಯಿದೆ.
ಮೋಜು ಮಸ್ತಿಗೆಂದು ಬರುವ ಕೆಲವೇ ಕೆಲವು ಜನರಿಂದ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆಯಾಗುತ್ತಿದೆ ಎಂದು ಆಪಾದಿಸಿರುವ ಸಮಿತಿ, ವಸ್ತ್ರ ಸಂಹಿತೆ ಜಾರಿಗಾಗಿ ಎರಡೂ ಕ್ಷೇತ್ರದಲ್ಲಿ ಹೆಚ್ಚಿನ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಭಾಗಮಂಡಲ ಹಾಗು ತಲಕಾವೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದಿರುವ ಸಮಿತಿ ತುಂಡುಡುಗೆ ತೊಟ್ಟುಬರುವವರಿಗೆ ಶಲ್ಯ ಹಾಗು ಪಂಚೆಯನ್ನು ಬಾಡಿಗೆ ನೀಡುತ್ತಿದೆ. ಜಿಲ್ಲೆಯ ವಿವಿಧ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿಗೂ ಬರುವ ಪ್ರವಾಸಿಗರು ಇಲ್ಲಿನ ಪಾವಿತ್ರ್ಯತೆ ಅರ್ಥಮಾಡಿಕೊಳ್ಳಬೇಕು ಎಂಬುದು ಸ್ಥಳೀಯರು ಅಭಿಪ್ರಾಯವಾಗಿದೆ.

Leave a Reply