ಜೆಡಿಎಸ್ ಜಾಹೀರಾತುಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಥಾನವೇ ಇಲ್ಲ!

ಬೆಂಗಳೂರು: ಮೊದಲು ರಾಜ್ಯದ ಕೆಲ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸೋದು ಇಷ್ಟ ಇಲ್ಲ ಎನ್ನಲಾಗ್ತಿತ್ತು. ಇದು ಗೊತ್ತಿದ್ದೋ ಏನೋ, ತೆನೆ ನಾಯಕರು ಕಾಂಗ್ರೆಸ್ ಹೈಕಮಾಂಡ್ ಜೊತೆ ಈಗ ನೇರ ಸಂಪರ್ಕ ಸಾಧಿಸಿದ್ದಾರೆ.

ಈ ಮಾತಿಗೆ ಪೂರಕ ಎನ್ನುವಂತೆ ಜೆಡಿಎಸ್ ಜಾಹೀರಾತುಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸ್ಥಾನವೇ ಸಿಕ್ಕಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸೋನಿಯಾ, ರಾಹುಲ್, ಮಾಯಾವತಿ ಫೋಟೋಗಳು ಮಾತ್ರ ಜಾಹೀರಾತುಗಳಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಜೆಡಿಎಸ್ ತಮ್ಮ ವ್ಯವಹಾರ ಏನಿದ್ರೂ ಡೆಲ್ಲಿ ಲೆವೆಲ್, ರಾಜ್ಯ ನಾಯಕರ ಜೊತೆ ಅಲ್ಲ ಎಂಬ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.

ಇದು ರಾಜ್ಯ ಕಾಂಗ್ರೆಸ್‍ನಲ್ಲಿ ತಳಮಳ ಉಂಟು ಮಾಡಿದೆ. ನಮ್ ಕತೆ ಏನಪ್ಪಾ ಅನ್ನೋ ಚಿಂತೆಯಲ್ಲಿ ಕೆಲ ನಾಯಕರು ಮುಳುಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಈಗ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ಚುನಾವಣೆಗೆ ಮೊದಲು ಸಿದ್ದರಾಮಯ್ಯ ಜೊತೆ ರಾಹುಲ್ ನಿಕಟ ಬಾಂಧವ್ಯ ಹೊಂದಿದ್ದರು. ಹಲವು ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತೇ ಫೈನಲ್ ಆಗುತಿತ್ತು. ಆದರೆ ಅತಂತ್ರ ಫಲಿತಾಂಶದ ಬಳಿಕ ಸಿದ್ದರಾಮಯ್ಯನವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ. ಮೈತ್ರಿ ಸರ್ಕಾರ ಇರುವಾಗ ಸಿದ್ದರಾಮಯ್ಯಗೆ ಮಣೆ ಹಾಕಿದ್ರೆ ಕಷ್ಟ ಎನ್ನುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆಯಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಇತ್ತ ಫಲಿತಾಂಶದ ಬಳಿಕ ಬಹುಮತ ಸಾಬೀತುಪಡಿಸದೇ ಲಾಬಿ ಮಾಡಲೂ ಯಾರೂ ದೆಹಲಿಗೆ ಬರಬೇಡಿ ಅಂತ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿತ್ತು. ಆದರೆ ಈ ನಡುವೆ ಎಚ್‍ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿ ಮಾಡಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಮೈತ್ರಿ ಸರ್ಕಾರ ಬಂದಾಗ ರಾಜ್ಯ ಕಾಂಗ್ರೆಸ್ ನಾಯಕರನ್ನೇ ಹೈಕಮಾಂಡ್ ಕಡೆಗಣಿಸುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.


ಹೆಚ್‍ಡಿಕೆ ಸಂಪುಟದಲ್ಲಿ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗೋದು ಅನುಮಾನ ಎನ್ನಲಾಗುತ್ತಿದೆ. ಹಲವು ಜಿಲ್ಲೆಗಳಿಗೆ ಉಸ್ತುವಾರಿಗಳಾಗಿ ಹೊರಗಿನವರು ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯೇ ಆಗಿಲ್ಲ. ಉಡುಪಿಯಲ್ಲಂತೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. 2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗಲೂ ಇಂತದ್ದೇ ಸ್ಥಿತಿ ನಿರ್ಮಾಣ ಆಗಿತ್ತು. ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವರಾಗದಿದ್ದರೆ ಆ ಜಿಲ್ಲೆಗಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಹೀಗಾಗಿ ಹೊಸ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *