ನಾವು ಮೊದಲು ಕಾಂಗ್ರೆಸ್‍ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ: ಹೆಚ್‍ಡಿಡಿ

ಬೆಂಗಳೂರು: ಕರ್ನಾಟಕ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಜೊತೆಗಿನ ಮೈತ್ರಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಮೊದಲು ಅವರಿಗೆ ಬಿಟ್ಟುಕೊಡಲಾಗಿತ್ತು. ಆದ್ರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂದಿ ಅವರೇ ಸಿಎಂ ಸ್ಥಾನ ಬೇಡವೆಂದು ಹೇಳಿದ್ದಾರೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಆಡಳಿತ ದೇಶದ ವಾತಾವರಣವನ್ನು ಹಾಳು ಮಾಡಿದೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಎಲ್ಲರೂ ನಮ್ಮ ನಡೆಯನ್ನು ಸ್ವಾಗತಿಸಿದ್ದಾರೆ.

ಮೈತ್ರಿ ಒಪ್ಪಿಕೊಂಡಿದ್ದು ಯಾಕೆ?
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಮ್ಮನ್ನು ಬಿಜೆಪಿಯ ಬಿ-ಟೀಂ ಅಂತಾ ಕರೆದಾಗ ಸಹಜವಾಗಿ ನೋವಾಗಿತ್ತು. ಆದ್ರೆ ಈ ಬಾರಿ ಚುನಾವಣೆಯಲ್ಲಿ ಎಲ್ಲ ನಾಯಕರು ಕನಿಷ್ಟ ನೈತಿಕ ಗುಣಮಟ್ಟವನ್ನು ಸಹ ನೋಡದೇ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ರು. ಬೇರೆ ನಾಯಕರ ಆರೋಪಗಳಿಗೆ ನಮ್ಮವರು ಸಹ ತಿರುಗೇಟು ನೀಡಿದ್ರು. ಚುನಾವಣಾ ಪ್ರಚಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಹೊಗಳಿದ್ರು, ಮರುದಿನವೇ ನನ್ನ ವಿರುದ್ಧ ಮಾತನಾಡಿದಾಗ ಬೇಸರ ಉಂಟಾಯಿತು. ಜಾತ್ಯಾತೀತ ರಾಷ್ಟ್ರ ಮತ್ತು ನಾಡಿನ ರೈತರ ಒಳಿತಿಗಾಗಿ ಮೈತ್ರಿಯನ್ನು ಒಪ್ಪಿಕೊಂಡಿದ್ದೇವೆ ಅಂತಾ ಸ್ಪಷ್ಟಪಡಿಸಿದ್ರು.

ಸೋನಿಯಾ ಮತ್ತು ರಾಹುಲ್ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
1997ರಲ್ಲಿ ನಾನು ಪ್ರಧಾನಿ ಆದಾಗ ನಾನು ಎಂದೂ ಸೋನಿಯಾ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿಲ್ಲ. ಇನ್ನು ರಾಹುಲ್ ಗಾಂಧಿ 1997ರಲ್ಲಿ ಇನ್ನೂ ಚಿಕ್ಕ ಹುಡಗ. ಹಾಗಾಗಿ ನನ್ನ ರಾಜಕೀಯ ಇತಿಹಾಸ ತಿಳಿಯದೇ ನಮ್ಮನ್ನು ಸಂಘ ಪರಿವಾರ ಬಿ-ಟೀಂ ಅಂತಾ ಕರೆದ್ರು. ರಾಜ್ಯದ ಕೆಲ ನಾಯಕರ ಹೇಳಿದಂತೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ನಮ್ಮ ಬಗ್ಗೆ ಆರೋಪಗಳನ್ನು ಮಾಡಿದ್ರು.

78 ಸೀಟ್ ಕಾಂಗ್ರೆಸ್ ಹೊಂದಿದ್ದು, ನಿಮ್ಮದು ಕೇವಲ 37 ಸೀಟ್‍ಗಳಿದ್ರೂ ಸರ್ಕಾರ ನೀವು ರಚನೆ ಮಾಡ್ತೀರೋದು ಹೇಗೆ?
ಕುಮಾರಸ್ವಾಮಿ ಸಿಎಂ ಆಗೋದು ನನ್ನ ನಿರ್ಣಯವಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೇ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಬೇಕೆಂದು ಕೇಳಿಕೊಂಡ್ರು. ಕುಮಾರಸ್ವಾಮಿ ಒಬ್ಬರೇ ತಮ್ಮ ಮುಂದಾಳತ್ವದಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವ್ರಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ರಾಜ್ಯದ ಜನರ ಆಸೆಯೂ ಸಹ ಅದೇ ಆಗಿತ್ತು.

ಲೋಕಸಭಾ ಚುನಾವಣೆಗೂ ಮೈತ್ರಿ ಮುಂದುವರೆಯುತ್ತಾ?
ಮಮತಾ ಬ್ಯಾನರ್ಜಿ ಅವರು ಮೊದಲಿನಿಂದಲೂ ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಹಾಗೆಯೇ ಮಾಯಾವತಿ, ಚಂದ್ರಶೇಖರ್ ರಾವ್, ಚಂದ್ರಬಾಬು ನಾಯ್ಡು ಎಲ್ಲರೂ ಮೂಲಭೂತ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಹ ಇದೇ ಗುರಿಯನ್ನು ಹೊಂದಿದೆ ಅಂತಾ ತಿಳಿಸಿದ್ರು.

Comments

Leave a Reply

Your email address will not be published. Required fields are marked *