ಗ್ರಾಮದಲ್ಲಿದ್ದ ಬ್ಯಾಂಕ್ ಬೇರೆ ಕಡೆಗೆ ಶಿಫ್ಟ್: ರೊಚ್ಚಿಗೆದ್ದ ಉಡುಪಿ ಗ್ರಾಮಸ್ಥರಿಂದ ಪ್ರತಿಭಟನೆ

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ವಿಜಯ ಬ್ಯಾಂಕ್ ನ ಆಲೂರು ಶಾಖೆಯನ್ನು ಬೇರೆ ಗ್ರಾಮಕ್ಕೆ ಶಿಫ್ಟ್ ಮಾಡುವ ಕುರಿತು ಭಾರೀ ಜನಾಕ್ರೋಶ ವ್ಯಕ್ತವಾಗಿದೆ.

ಆಲೂರು ಗ್ರಾಮದಿಂದ ನಾಡ ಗ್ರಾಮಕ್ಕೆ ವಿಜಯಬ್ಯಾಂಕ್ ಶಾಖೆಯನ್ನು ಶಿಫ್ಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಗ್ರಾಹಕರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನೂರಾರು ಗ್ರಾಮಸ್ಥರು ಬ್ಯಾಂಕ್ ಮುಂಭಾಗ ಜಮಾಯಿಸಿದ್ದರು. ಬ್ಯಾಂಕ್ ಶಿಫ್ಟ್ ಮಾಡುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್ ನಲ್ಲಿ ತಿಂಗಳಿಗೆ 25 ಕೋಟಿಗೂ ಹೆಚ್ಚು ವ್ಯವಹಾರವಿದೆ. ಬ್ಯಾಂಕ್ ನಾಡ ಗ್ರಾಮಕ್ಕೆ ಶಿಫ್ಟಾದರೆ ವ್ಯವಹಾರ ಮಾಡಲು ಗ್ರಾಹಕರು 10 ಕಿಲೋಮೀಟರ್ ನಷ್ಟು ದೂರ ಹೋಗಬೇಕು. ಈ ಹಿನ್ನೆಲೆಯಲ್ಲಿ ಗ್ರಾಹಕರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ರು.

ಪ್ರಧಾನಿ ಮೋದಿ ಡಿಜಿಟಲ್ ವ್ಯವಹಾರ ಮಾಡಲು ಒಂದೆಡೆ ಉತ್ತೇಜನ ಕೊಡುತ್ತಿದ್ದರೆ, ಮತ್ತೊಂದೆಡೆ ಬ್ಯಾಂಕ್ ಅಧಿಕಾರಿಗಳು ಈ ಯೋಜನೆಗೆ ಸ್ಪಂದನೆ ನೀಡುತ್ತಿಲ್ಲ ಅಂತ ಆರೋಪಿಸಿದರು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದರು. ಪ್ರತಿಭಟನಾಕಾರರಿಗೆ ಬ್ಯಾಂಕ್ ಉಳಿಸಿಕೊಡುವ ಭರವಸೆ ನೀಡಿದರು.

ಬ್ಯಾಂಕ್ ಗ್ರಾಹಕ ಜಯರಾಂ ಆಲೂರು ಮಾತನಾಡಿ, ನಮಗೆ ನಮ್ಮ ಬ್ಯಾಂಕ್ ಉಳಿಸಿಕೊಡಿ. ದೂರದ ಊರಿಗೆ ವ್ಯವಹಾರಕ್ಕೆ ಹೋಗಲು ಕಷ್ಟವಾಗುತ್ತದೆ. ಬ್ಯಾಂಕ್ ಶಿಫ್ಟ್ ಆದ್ರೆ ನಮ್ಮ ಅಕೌಂಟ್ ಕ್ಲೋಸ್ ಮಾಡಬೇಕಾಗುತ್ತದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *