ಸಿಎಂ ಯಡಿಯೂರಪ್ಪಗೆ ಇಂದು ಬಿಗ್ ಡೇ- ವಿಶ್ವಾಸಮತ ಯಾಚನೆ ಅಗ್ನಿಪರೀಕ್ಷೆಲಿ ವಿನ್ ಆಗ್ತಾರಾ ಬಿಎಸ್‍ವೈ?

ಬೆಂಗಳೂರು: ಐಪಿಎಲ್ ಟೂರ್ನಿಯನ್ನೂ ಮೀರಿಸುವಷ್ಟು ಥ್ರಿಲ್ಲಿಂಗ್ ಆಗಿದೆ ಕರ್ನಾಟಕ ಪೊಲಿಟಿಕಲ್ ಲೀಗ್. ಬಿಜೆಪಿಗೆ ಇಂದು ಮಾಡು ಇಲ್ಲವೇ ಮಡಿ ಅನ್ನೋ ಪಂದ್ಯ. ಮೆಜಾರಿಟಿ ಇಲ್ಲದಿದ್ದರೂ ಹಠಕ್ಕೆ ಬಿದ್ದು ಮುಖ್ಯಮಂತ್ರಿ ಪಟ್ಟಕ್ಕೇರಿದ ಯಡಿಯೂರಪ್ಪ ಅವರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ.

104 ಸ್ಥಾನ ಪಡೆದು ನಮ್ಮದೇ ದೊಡ್ಡ ಪಕ್ಷ ಅಂತ ರಾಜ್ಯಪಾಲರ ಕೃಪೆಗೆ ಪಾತ್ರರಾದ್ರು. ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ಪಡೆದು ನಾನಾ ತಂತ್ರ-ರಣತಂತ್ರ ರೂಪಿಸಿದ್ರು. ಆದ್ರೆ ಇಂದೇ ಅಗ್ನಿಪರೀಕ್ಷೆ ಎದುರಿಸಬೇಕಾದ ಸಂಕಷ್ಟ-ಸಂದಿಗ್ಧತೆಯಲ್ಲಿ ಬಿಎಸ್‍ವೈ ಸಿಲುಕಿಕೊಂಡಿದ್ದಾರೆ.

ಬಿಜೆಪಿ ನಡೆ ಪ್ರಶ್ನಿಸಿ ಕಾನೂನು ಸಮರ ಸಾರಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೊದಲ ಜಯ ಸಾಧಿಸಿದೆ. ಒಟ್ಟಿನಲ್ಲಿ ಇಂದು ಸಂಜೆ 4 ಗಂಟೆಗೆ ಯಡಿಯೂರಪ್ಪ ವಿಶ್ವಾಸಮತ ಸಾಬೀತು ಪಡಿಸಬೇಕಿದೆ. ಹಾಗಾಗಿ ಇಡೀ ದೇಶದ ಚಿತ್ತ ಕರ್ನಾಟಕ ಅಸೆಂಬ್ಲಿ ಮೇಲೆ ನೆಟ್ಟಿದೆ.

ಸರ್ಕಾರ ಉಳಿಸಿಕೊಳ್ಳಲು ಶುಕ್ರವಾರ ಇಡೀ ದಿನ ಬಿಡುವಿಲ್ಲದೆ ಬಿಜೆಪಿ ನಾಯಕರು ಫುಲ್ ಬಿಜಿಯಾಗಿದ್ರು. ಸಂಜೆ ಹೊತ್ತಿಗೆ ಶಾಸಕರನ್ನ ಶಾಂಗ್ರಿಲಾ ಹೊಟೇಲ್‍ಗೆ ಶಿಫ್ಟ್ ಮಾಡಿ ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಸಭೆ ನಡೆಸಿದ್ರು. ಸಭೆಯಲ್ಲಿ ಕೇವಲ 86 ಶಾಸಕರು ಮಾತ್ರ ಹಾಜರಾಗಿದ್ರು, ಉತ್ತರ ಕರ್ನಾಟಕ ಭಾಗದ ಹಲವು ಶಾಸಕರ ಆಗಮನ ವಿಳಂಬವಾಗಿದ್ದು, ಇಂದು ಬೆಳಗಿನ ಜಾವ ಎಲ್ಲರೂ ಆಗಮಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಅಧಿವೇಶನದಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ನಾಯಕರು ಸಲಹೆ ಸೂಚನೆ ನೀಡಲಿದ್ದಾರೆ. ಇಂದು 104 ಶಾಸಕರು ಬಸ್‍ಗಳ ಮೂಲಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಸಿಟಿ ರವಿ, ಶೋಭಾ ಕರಂದ್ಲಾಜೆ ಇದರ ಮೇಲುಸ್ತುವಾರಿ ಪಡೆದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಹಾಗಾದ್ರೆ ಈ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹೇಗೆ ನಡೆಯುತ್ತೆ ಅಂತಾ ನೋಡೋದಾದ್ರೆ..
* ಚುನಾಯಿತ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ವಿಪ್ ಅನ್ವಯ
* ಸಿಎಂ ಯಡಿಯೂರಪ್ಪ ಮೊದಲು ಪ್ರಸ್ತಾವ ಮಂಡಿಸುತ್ತಾರೆ.
* ಬಹುಮತ ನೀಡಬೇಕು ಅಂತ ಸಿಎಂ ಪ್ರಸ್ತಾವ ಮಂಡನೆ ಮಾಡ್ತಾರೆ.
* ಬಳಿಕ ಪ್ರಸ್ತಾವವನ್ನ ಮತಕ್ಕೆ ಹಾಕಲಾಗುತ್ತೆ.
* ಮತಕ್ಕೆ ಹಾಕಿದ ನಂತ್ರ ಪ್ರಸ್ತಾವದ ಮೊದಲು ಪರ ಇರೋರನ್ನ ಎದ್ದು ನಿಲ್ಲಲು ಹೇಳಲಾಗುತ್ತದೆ
* ಪರ ಇರುವವರ ಲೆಕ್ಕ ಆಕ್ಕ ಹಾಕಲಾಗುತ್ತದೆ
* ನಂತರ ವಿರೋಧ ಇರುವವರನ್ನ ಎದ್ದು ನಿಲ್ಲಲು ಹೇಳಲಾಗುತ್ತದೆ
* ವಿರೋಧ ಇರುವವರನ್ನು ಲೆಕ್ಕ ಹಾಕಲಾಗುತ್ತದೆ
* ಇದರ ಅಧಾರದ ಮೇಲೆ ಅಂಗೀಕಾರ ಅಥವಾ ತಿರಸ್ಕಾರ ಆಗಿದೆ ಅನ್ನೋದನ್ನ ಸ್ಪೀಕರ್ ಘೋಷಣೆ ಮಾಡ್ತಾರೆ.
* ಒಂದು ವೇಳೆ ಎರಡು ಪಕ್ಷಗಳಿಗೂ ಸಮ-ಸಮ ಬಂದರೆ ಆಗ ಹಂಗಾಮಿ ಸ್ಪೀಕರ್‍ಗೆ ಓಟ್ ಹಾಕಲು ಅವಕಾಶ

Comments

Leave a Reply

Your email address will not be published. Required fields are marked *