ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ: ರಾಹುಲ್ ಗಾಂಧಿ

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಛತ್ತೀಸ್‍ಗಢದ ರಾಯಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶಾಸಕರು ಒಂದೆಡೆ ನಿಂತಿದ್ದರೆ, ರಾಜ್ಯಪಾಲರೇ ಒಂದೆಡೆ ನಿಂತಿದ್ದಾರೆ. ಈಗಾಗಲೇ ತನ್ನ ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಲಾಗುತ್ತಿದೆ ಎಂದು ಜೆಡಿಎಸ್ ಹೇಳಿದೆ. ಈ ಮೂಲಕ ಇಂದು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗಿದೆ ಹೇಳಿದರು.

ಇದೇ ವೇಳೆ ಆರ್ ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ರಾಷ್ಟ್ರದಲ್ಲಿರುವ ಎಲ್ಲಾ ಉನ್ನತ ಸಂಸ್ಥೆಗಳಿಗೆ ಆರ್ ಎಸ್‍ಎಸ್ ಎಂಟ್ರಿ ಕೊಡುತ್ತಿದೆ. ಪಾಕಿಸ್ತಾನದ ಹಾಗೇ ಇಲ್ಲಿಯೂ ಸರ್ವಾಧಿಕಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಇಲ್ಲದೇ ಇದ್ದರೂ ಸಹ ಬಿಜೆಪಿ ಪಕ್ಷ ಸರ್ಕಾರ ರಚಿಸಲು ಮುಂದಾಗಿದೆ. ಇದು ವಿವೇಚನಾ ರಹಿತ ಕಾರ್ಯವಾಗಿದ್ದು, ಈ ನಡೆ ಸಂವಿಧಾನದಕ್ಕೆ ಅಪಾಯಕಾರಿ. ಇಂದು ಬೆಳಗ್ಗೆ ಬಿಜೆಪಿ ಪಕ್ಷ ತನ್ನ ಜಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಭಾರತ ಮಾತ್ರ ಪ್ರಜಾಪ್ರಭುತ್ವದ ಸೋಲಿನಿಂದ ದುಃಖಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದೇ ಇದ್ದರೂ ಸಹ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದನ್ನು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಬಿಜೆಪಿ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ತನ್ನ ಶಾಸಕರ ಸಂಖ್ಯೆಯನ್ನು 104ಕ್ಕಿಂತ ಹೆಚ್ಚಿದೆ ಎಂದು ನಮೂದಿಸಿಲ್ಲ. ಆಲ್ಲದೇ ಗೌವರ್ನರ್ ಅವರ ಆಮಂತ್ರಣ ಪತ್ರದಲ್ಲೂ ಯಾವುದೇ ಸಂಖ್ಯೆ ನಮೂದಿಸಿಲ್ಲ ಎಂದು ಬರೆದು ಕೊಂಡಿದ್ದು, ಬಿಎಸ್‍ವೈ ಅವರಿಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬುದನ್ನು ನಮೂದಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *