ಮದ್ವೆಯಾಗಿ ಪತಿಯ ಮನೆಗೆ ತೆರಳುತ್ತಿದ್ದಾಗಲೇ ದುರಂತ – ನವ ವಧು ದುರ್ಮರಣ

ಲಕ್ನೋ: ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ನವ ವಿವಾಹಿತರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ವಧುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

18 ವರ್ಷದ ಮಹ್ವಿಶ್ ಪರ್ವೀನ್ ಮೃತ ನವವಿವಾಹಿತೆ. ಈ ಘಟನೆ ರಾಷ್ಟ್ರೀಯ ಹೆದ್ದಾರಿ58 ರಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಏನಿದು ಘಟನೆ?: ವಧು ಪರ್ವೀನ್, ವರ ಮೊಹಮ್ಮದ್ ಷಾಝೆಬ್(22) ಹಾಗೂ ಇತರೆ ಮೂವರು ಕುಟುಂಬ ಸದಸ್ಯರು ಶುಕ್ರವಾರ ಗಾಜಿಯಾಬಾದ್ ನಹ್ಲಾ ಹಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮುಜಫರ್ ನಗರದ ಮನೆಗೆ ಹಿಂದಿರುಗುತ್ತಿದ್ದರು. ಮೀರತ್ ಜಿಲ್ಲೆಯ ಮಟೋರಾ ಗ್ರಾಮದ ಬಳಿ ಕಾರು ಹೋಗುತ್ತಿದ್ದಂತೆಯೇ ನವ ವಿವಾಹಿತರಿದ್ದ ವಾಹನದ ಮೇಲೆ ಎರಡು ಕಾರುಗಳಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಸುಮಾರು 12 ದರೋಡೆಕೋರರು ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ಓರ್ವರ ಮೇಲೆ ಗನ್ ಪಾಯಿಂಟ್ ಇಟ್ಟರು. ಈ ವೇಳೆ ವಧು ಪರ್ವೀನ್ ಭಯದಿಂದ ಕಿರುಚಿಕೊಂಡಿದ್ದಾರೆ. ಆಗ ದರೋಡೆಕೋರ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಲಕ್ಷಾಂತರ ರೂ. ಮೌಲ್ಯದ ಹಣ, ಬಂಗಾರವನ್ನು ದೋಚಿ ಪರಾರಿಯಾಗಿದ್ದಾರೆ.

ಗುಂಡೇಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಪರ್ವೀನ್ ರನ್ನು ಕೂಡಲೇ ಸಮೀಪದ ಮುಜಾಫರ್ ನಗರ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕಾರಿನ ಮುಂಭಾಗದ ಸೀಟಿನಲ್ಲಿ ನನ್ನ ¸ಸಹೋದರ ಕುಳಿತಿದ್ದರು. ದರೋಡೆಕೋರರು ಅವರಿಗೆ ಗನ್ ತೋರಿಸಿ ಬಂಗಾರ ಮತ್ತು ಹಣವನ್ನು ಕೊಡುವಂತೆ ಬೇಡಿಕೆ ಇಟ್ಟರು. ನಂತರ ನಾವು ನಮ್ಮ ಬಳಿ ಇದ್ದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ಕೊಟ್ಟಿದ್ದೆವು. ಆದ್ರೂ ನನ್ನ ಪತ್ನಿಗೆ ಗುಂಡು ಹಾರಿಸಿದ್ದಾರೆ ಎಂದು ನೊಂದ ವರ ದುಃಖಿತರಾಗಿದ್ದಾರೆ.

ಈ ಕುರಿತು ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ. ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದ್ದೇವೆ. ನವ ವಿವಾಹಿತರಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಕಾರಿನ ನಂಬರ್ ಪ್ಲೇಟ್ ದೆಹಲಿಯಲ್ಲಿ ನೋಂದಣಿಯಾಗಿದ್ದು, ಮೀರತ್ ಮೂಲದ ವ್ಯಾಪಾರಿ ಪ್ರದೀಪ್ ಬನ್ಸಾಲ್ ಹೆಸರಿನಲ್ಲಿ ಈ ಸಂಖ್ಯೆಯನ್ನ ನೋಂದಾಯಿಸಲಾಗಿದೆ ಎಂದು ಮೀರತ್ ನ ಎಸ್‍ಪಿ ದ್ವಿವೇದಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *