ಸಿಎಂ ಜೊತೆ ಮಾತಿನ ಜಟಾಪಟಿ ನಡೆಸಿದ್ದ ಮರಿಸ್ವಾಮಿಗೆ ಎಚ್‍ಡಿಕೆಯಿಂದ ಸನ್ಮಾನ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದ ಪಕ್ಷದ ಕಾರ್ಯಕರ್ತ ಮರಿಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಸನ್ಮಾನಿಸಿದ್ದಾರೆ.

ತಾವು ತಂಗಿದ್ದ ಖಾಸಗಿ ರೆಸಾರ್ಟ್ ಗೆ ಕರೆಸಿಕೊಂಡು ಎಚ್‍ಡಿ ಕುಮಾರಸ್ವಾಮಿ ಅವರು ಹಳೆಕೆಸರೆ ಗ್ರಾಮದ ಗ್ರಾ.ಪಂ. ಸದಸ್ಯ ಮರಿಸ್ವಾಮಿ ಅವರನ್ನು ಸನ್ಮಾನಿಸಿದ್ದಾರೆ.

ವರುಣಾ ಮತ್ತು ಟಿ.ನರಸೀಪುರ ನಡೆದಿರುವಷ್ಟು ಅಕ್ರಮಗಳು ಇನ್ನೆಲ್ಲೂ ನಡೆದಿಲ್ಲ. ಯಾವುದೇ ಕಾರಣಕ್ಕೂ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ದೇವೇಗೌಡರ ಆಶೀರ್ವಾದ ಇಲ್ಲ. ಅಕ್ರಮ ಮಾಡಿರುವವರಿಗೆ ನಾವು ಯಾಕೆ ಆಶೀರ್ವಾದ ಮಾಡಬೇಕು? ದೇವೇಗೌಡರ ಆಶೀರ್ವಾದ ತಮಗೆ ಇದೆ ಎಂದು ಸುಳ್ಳು ಹೇಳಿ ಮಹಾದೇವಪ್ಪ ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬುಧವಾರ ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆದಿತ್ತು.

ಏ ಮರಿಸ್ವಾಮಿ… ನೀ ನನ್ನ ಜೊತೆ ಇದ್ದಲ್ಲಯ್ಯ ಬಾ ಅಂತ ಸಿಎಂ ಕರೆದ್ರು. ಆಗ ಮರಿಸ್ವಾಮಿ, ನಾನು ಜೆಡಿಎಸ್‍ನಲ್ಲಿದ್ದೇನೆ ಬರೋಲ್ಲ ಎಂದರು. ಆಗ ಸಿದ್ದರಾಮಯ್ಯ, ಆಯ್ತು ನೀ ಬರಬೇಡ ವೋಟು ಹಾಕು ಅಂದ್ರು. ಇದಕ್ಕೆ ಮರಿಸ್ವಾಮಿ, ನಾ ಬರೋದು ಇಲ್ಲ, ವೋಟು ಹಾಕೋಲ್ಲ ಎಂದ್ರು. ಅದಕ್ಕೆ ಸಿಎಂ ಆಯ್ತು ಬರಬೇಡ ಹೋಗು ಎಂದರು.

ಸಿಎಂ ಮಾತಿನಿಂದ ಗರಂ ಆದ ಮರಿಸ್ವಾಮಿ, ನೀವು ನಮ್ಮ ಊರಿನಲ್ಲಿ ಇರೋದು. ಮೊದ್ಲು ನೀವೇ ಹೋಗಿ. ನಿಮ್ಮನ್ನ ಉಪಮುಖ್ಯಮಂತ್ರಿ ಮಾಡಿದ ಮಹಾಸ್ವಾಮಿಗೆ ದೊಡ್ಡ ನಮಸ್ಕಾರ ಎಂದು ತಿರುಗೇಟು ನೀಡಿದ್ದರು.

Comments

Leave a Reply

Your email address will not be published. Required fields are marked *