ಅಪ್ರಾಪ್ತ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಮರಣ ದಂಡನೆ – ಪೋಸ್ಕೋ ಕಾಯ್ದೆ ತಿದ್ದುಪಡಿಗೆ ಕೇಂದ್ರ ಚಿಂತನೆ

ನವದೆಹಲಿ: ದೇಶ್ಯಾದ್ಯಂತ ಹೆಚ್ಚುತ್ತಿರುವ ಅಪ್ರಾಪ್ತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಮೇಲಿನ ಆಕ್ರೋಶಕ್ಕೆ ಕಿವಿಗೊಟ್ಟಿರುವ ಕೇಂದ್ರ ಸರ್ಕಾರ 12 ವರ್ಷಗಳ ಕೆಳಗಿನ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಚಿಂತನೆ ನಡೆಸಿದೆ.

ಈ ಕ್ರಮಕ್ಕೆ ಪೂರಕವಾಗಿ ಈಗಾಗಲೇ ಜಾರಿಯಲ್ಲಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ತೀರ್ಮಾನಿಸಿದ್ದು, ಈ ಕುರಿತು ಶುಕ್ರವಾರ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸುಪ್ರೀಂ ಕೋರ್ಟ್‍ಗೆ ವಕೀಲ ಶ್ರೀವಾಸ್ತವ ಎಂಬವರು ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯಲ್ಲಿ 12 ವರ್ಷಗಳ ಕೆಳಗಿನ ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಮನವಿ ಮಾಡಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ಏಪ್ರಿಲ್ 27 ಕ್ಕೆ ವಿಚಾರಣೆಯನ್ನು ಮುಂದೂಡಿತು.

ಕಳೆದ ಕೆಲ ದಿನಗಳ ಹಿಂದೆ ಜಮ್ಮು ಕಾಶ್ಮೀರದ ಅಪ್ರಾಪ್ತ ಬಾಲಕಿ ಆಸಿಫಾ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬಳಿಕ ಕೇಂದ್ರ ಸಚಿವೆ ಮನೇಕಾ ಗಾಂಧಿ ಪೋಸ್ಕೋ ಕಾಯ್ದೆಗೆ ತಿದ್ದುಪಡಿ ತರುವ ಕಾನೂನಿನ ಕುರಿತು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ನೀಡಲು ಸೂಚಿಸಿದ್ದರು.

ದೇಶದಲ್ಲಿ ಆಸಿಫಾ ಹಾಗೂ ಅಪ್ರಾಪ್ತ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ತಮಗೆ ತೀವ್ರ ನೋವುಂಟು ಮಾಡಿದೆ. ಇಂತಹ ಪ್ರಕರಣಗಳನ್ನು ತಡೆಯಲು ಪೋಸ್ಕೋ ಕಾಯ್ದೆಯಲ್ಲಿ ತಿದ್ದುಪಡಿ ತರುವ ಕುರಿತು ಚಿಂತನೆ ನಡೆಸುವ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.

Comments

Leave a Reply

Your email address will not be published. Required fields are marked *