ಬೆಂಗ್ಳೂರಲ್ಲಿ ರಾತ್ರಿ 2 ರೌಡಿಗ್ಯಾಂಗ್‍ಗಳ ಅಟ್ಟಹಾಸ- 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಪುಡಿ ಪುಡಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾತ್ರೋ ರಾತ್ರಿ ಮಚ್ಚು ಲಾಂಗುಗಳು ಅಟ್ಟಹಾಸ ಮೆರೆದಿವೆ. ಎರಡು ರೌಡಿ ಗ್ಯಾಂಗ್ ಗಳ ಅಟ್ಟಹಾಸಕ್ಕೆ ಜನ ಭಯಭೀತರಾಗಿದ್ದಾರೆ. ಏಕಾಏಕಿ ರೌಡಿಗಳ ದಾಳಿಯಿಂದ ಅನೇಕ ಜನ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಮಚ್ಚು ಲಾಂಗಿನೇಟಿಗೆ ಅಂಗಡಿ, ಕಾರ್, ಆಟೋಗಳ ಗ್ಲಾಸ್ ಗಳು ಪುಡಿಪುಡಿಯಾಗಿವೆ.

ಶನಿವಾರ ರಾತ್ರಿ 10 ಗಂಟೆಗೆ 4 ಬೈಕ್ ಗಳಲ್ಲಿ ಬಂದ 10 ಜನ ದುಷ್ಕರ್ಮಿಗಳು ಮಚ್ಚುಲಾಂಗುಗಳಿಂದ ಕಾವಲ್ ಭೈರಸಂದ್ರದ ಮೋದಿ ಗಾರ್ಡನ್ ಬಳಿ ಅಂಗಡಿಗಳು ಸೇರಿ ರಸ್ತೆ ಬದಿ ಪಾರ್ಕ್ ಮಾಡಿದ್ದ 20ಕ್ಕೂ ಹೆಚ್ಚು ಕಾರ್, ಆಟೋಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ. ಇದು ಸ್ಥಳೀಯರ ಮನೆ ಮುಂದೆ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೋದಿಗಾರ್ಡನ್ ನ ನಿವಾಸಿಗಳಾದ ಜೊಳ್ಳ್ ಇಮ್ರಾನ್ ಮತ್ತು ಅನೀಜ್ ಗ್ಯಾಂಗ್ ನ ದಾಳಿಯಿಂದ ಐದಾರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಡಿ ರೌಡಿಗಳ ದಾಳಿಯಿಂದ ಸ್ಥಳೀಯ ಜನ ಭಯಭೀತರಾಗಿದ್ದಾರೆ.

ಮೋದಿಗಾರ್ಡನ್ ನಿವಾಸಿಗಳಾದ ಜೊಳ್ಳ್ ಇಮ್ರಾನ್ ಮತ್ತು ಅನೀಜ್ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿಯ ರೌಡಿಶೀಟರ್ ಗಳು. ಈಗಾಗಲೇ ಅನೇಕ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದಾರೆ. ಸ್ಥಳೀಯವಾಗಿ ಸುಬಾನ್ ಗ್ಯಾಂಗ್ ಜೊತೆ ವೈಷಮ್ಯ ಬೆಳೆಸಿಕೊಂಡಿದ್ದ ಅನೀಜ್ ಗ್ಯಾಂಗ್ ಏರಿಯಾದಲ್ಲಿ ಹವಾ ಮುಂದುವರೆಸಲು ಈ ರೀತಿಯ ದುಷ್ಕೃತ್ಯಗಳಿಗೆ ಮುಂದಾಗಿದ್ದಾರೆ. ಡಿ.ಜೆ.ಹಳ್ಳಿ ಠಾಣೆಯಲ್ಲಿ ಇವರ ವಿರುದ್ಧ ಅನೇಕ ದೂರುಗಳಿದ್ದರೂ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ಮೇಯರ್ ಸಂಪತ್ ರಾಜ್ ಪ್ರತಿನಿಧಿಸೋ ಡಿ.ಜೆ.ಹಳ್ಳಿ ವಾರ್ಡ್ 47 ರ ಮೋದಿ ಗಾರ್ಡನ್ ನಲ್ಲಿನ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಭಯವನ್ನುಂಟುಮಾಡಿದೆ. ಒಟ್ಟಿನಲ್ಲಿ ಎರಡು ರೌಡಿ ಗ್ಯಾಂಗುಗಳ ಕೋಲ್ಡ್ ವಾರ್ ಜನ ಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಅನುಮಾನದ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ ಪೊಲೀಸರು ನಾಲ್ಕು ಜನ ದುಷ್ಕರ್ಮಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *